
ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪಕರ ಮೂಲ ಆಶಯದ ಆದರ್ಶವನ್ನು – ಕನ್ನಡಿ ಎಂಬರ್ಥದಲ್ಲಿ – ಅದರ ಧ್ಯೇಯವಾಕ್ಯವು ಔಚಿತ್ಯಪೂರ್ಣವಾಗಿ ಪ್ರತಿಫಲಿಸುತ್ತದೆ. ನ ಹಿ ಜ್ಞಾನೇನ ಸದೃಶಂ ಎಂಬ ಗೀತಾವಾಕ್ಯವದು. ಈ ವಾಕ್ಯವನ್ನೊಳಗೊಂಡ ಶ್ಲೋಕವು ಆತ್ಮಜ್ಞಾನದ ಪಾರಮ್ಯವನ್ನು ಸಾರುವುದಷ್ಟೇಯಲ್ಲದೆ ಅದರ ಸಾಧಾನಾಮಾರ್ಗವನ್ನೂ ಸೂತ್ರರೂಪದಿಂದ ಸೂಚಿಸುತ್ತದೆ. ಅಂದರೆ, ನಮ್ಮ ದೇಶದ ವಿದ್ಯೆ ಮತ್ತು ಜ್ಞಾನಪರಂಪರೆಯ ಮೂಲ ದರ್ಶನ - ಪರಿಕಲ್ಪನೆ - ಕ್ರಮಗಳಿಗೆ ಅನುಗುಣವಾಗಿದೆ. ಸಾ ವಿದ್ಯಾ ಯಾ ವಿಮುಕ್ತಯೇ ಎನ್ನುವುದು ಈ ಪರಂಪರೆಯ ತಳಹದಿ: ಮುಕ್ತಿಸಾಧಕವಾದ ವಿದ್ಯೆಯೇ ನಿಜವಾದ ವಿದ್ಯೆ ಎನ್ನುವುದು ಇದರ ತಾತ್ಪರ್ಯ.
ಸುಮಾರು ಒಂದು ವರ್ಷದ ಕೆಳಗೆ ಬಿ. ಜಿ. ಎಲ್. ಸ್ವಾಮಿಯವರ ಮೈಸೂರು ಡೈರಿ ಓದಿ ಮುಗಿಸಿದೆ. ಸ್ವಾಮಿಯವರು ೧೯೭೦ರ ದಶಕದ ಅಂತ್ಯದಲ್ಲಿ ಕಂಡ ಮೈಸೂರು ವಿಶ್ವವಿದ್ಯಾನಿಲಯವು ವಿಪರೀತಾರ್ಥದಲ್ಲಿ ಹೇಗೆ ಮುಕ್ತಿಸಾಧಕವಾಗಿತ್ತು ಎಂಬ ಬೋಧೆಯಾಯಿತು. ಬಿಡಿಸಿ ಹೇಳಬೇಕೆಂದರೆ ಮಹಾರಾಜಾ ಕಾಲೇಜು - ಮಾನಸಗಂಗೋತ್ರಿಗಳಲ್ಲಿ ಜ್ಞಾನ-ವಿದ್ಯೆಗಳಿಗೇ ವಿಮುಕ್ತಿಯಾಗಿತ್ತು ಎನ್ನುವುದು ಈ ಬೋಧೆಯ ಸಾರಾಂಶ.
ಮೈಸೂರು ಡೈರಿ ಸ್ವಾಮಿಯವರ ಕಟ್ಟಕಡೆಯ ಪುಸ್ತಕ. ಅವರ ಇಹಲೋಕನಿರ್ಗಮನದ ೧೪ ವರ್ಷಗಳ ಬಳಿಕ ಪ್ರಕಟವಾದದ್ದು. ಖೇದಾಶ್ಚರ್ಯವಾದರೂ ಇದರಲ್ಲಿ ಕೊಂಚ ತೃಪ್ತಿಯೂ ಉಂಟು – ಸದ್ಯ, ಇದಕ್ಕೆ ಪ್ರಕಟಣೆಯ ಭಾಗ್ಯವಾದರೂ ಲಭಿಸಿತಲ್ಲ ಎನ್ನುವ ಕ್ಷೀಣ ಸ್ವಸಾಂತ್ವನ.
೮೧ ಪುಟಗಳ ಈ ಪುಸ್ತಿಕೆಯಲ್ಲಿ ಸ್ವಾಮಿಯವರ ಅದೇ ಛಾಪು ಉದ್ದಕ್ಕೂ ಗೋಚರವಾಗುತ್ತದೆ. ಕಾಲೇಜು ರಂಗ, ಕಾಲೇಜು ತರಂಗ, ತಮಿಳು ತಲೆಗಳ ನಡುವೆ, ಇಲ್ಲೆಲ್ಲ ಕಾಣುವ ಅದೇ ವ್ಯಂಗ್ಯ, ವಿಡಂಬನೆ, ಕಟುಹಾಸ್ಯ ಹಾಗು ದಾರುಣ ಸನ್ನಿವೇಶಗಳ ತೀವ್ರತೆಯನ್ನು ನಗೆಯುಕ್ಕಿಸುವ ಮೂಲಕ ತಿಳಿಗೊಳಿಸಿ ತರುವಾಯ ಆಲೋಚನೆಗೆ ಈಡುಮಾಡುವ ಕಲೆಯಲ್ಲಿ ಸ್ವಾಮಿಯವರು ಅನ್ಯಾದೃಶವಾದ ಸಿದ್ಧಿಯನ್ನು ಪಡೆದಿದ್ದರು. ಹಾಸ್ಯದ ಹಾದಿಯನ್ನು ಹಾದುಹೋದರೆ ಜುಗುಪ್ಸೆಯ ರಾಜಧಾನಿಯಲ್ಲಿ ನಮ್ಮ ಪಯಣ ಪರ್ಯವಸಿಸುತ್ತದೆ.
ಮೈಸೂರು ಡೈರಿ ವಸ್ತುತಃ ಮೈಸೂರು ವಿಶ್ವವಿದ್ಯಾನಿಲಯದ ಅಧಃಪಾತದ ಕಥೆ. ಪ್ರತ್ಯಕ್ಷದರ್ಶಿಯೊಬ್ಬರು ನೈಜ ಘಟನೆಗಳ ಮೂಲಕ ಮಾಡಿರುವ ಸೂತ್ರರೂಪದ ನಿರೂಪಣೆ. ಸ್ವಾಮಿಗಳ ಮಾತಿನ ಭಾವಸಾರಾಂಶವನ್ನು ಹೇಳುವುದಾದರೆ, ಅದು ಮಹಾರಾಜಾ ಕಾಲೇಜು - ಮನಸಗಂಗೋತ್ರಿಗಳ ದುರಂತ ಕಥೆ. ಹಾಸ್ಯ, ರೌದ್ರ, ಭಾಯಾನಕ, ಭೀಭತ್ಸ ಹಾಗು ಕರುಣ ರಸಗಳ ವಿಲಕ್ಷಣ ಮಿಶ್ರಣ. ಅಲ್ಲಿ ಶಾಂತರಸಕ್ಕೆ ಸ್ಥಾನವಿಲ್ಲ.
ಸ್ವಾಮಿಯವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ತಾವಾಗಿ ಬಯಸಿಹೋದವರಲ್ಲ. ಅವರನ್ನು ಸಂದರ್ಶಕ ಪ್ರಾಧ್ಯಾಪಕರಾಗಿ ಯು.ಜಿ.ಸಿಯ ಪ್ರಭೃತಿಗಳು ಒಂದು ವರ್ಷದ ಅವಧಿಗೆ ಅಲ್ಲಿಗೆ ನೇಮಿಸಿತ್ತು. ಅಷ್ಟು ಹೊತ್ತಿಗಾಗಲೇ ಸ್ವಾಮಿಯವರು ನಿವೃತ್ತರಾಗಿ ಸಾಕಷ್ಟು ವರ್ಷ ಕಳೆದಿತ್ತು. ೧೯೭೯-೮೦ ತನಕ ಅಲ್ಲಿದ್ದು ಅಲ್ಲೇ ದೈವಾಧೀನರಾದರು.
ಈ ಲಘು ಪೀಠಿಕೆಗೆ ಕಾರಣವಿದೆ.
ಮೈಸೂರು ಡೈರಿಯಲ್ಲಿ ಬಿ.ಜಿ.ಎಲ್. ಸ್ವಾಮಿಯವರು ಕಂಡು, ನಮಗೆ ಕಂಡರಿಸಿರುವ ಮಹಾರಾಜಾ ಕಾಲೇಜು ಮತ್ತು ಮಾನಸಗಂಗೋತ್ರಿಗಳು ವಸ್ತುತಃ ಶೈಕ್ಷಣಿಕ - ಸಾಂಸ್ಕೃತಿಕ ಶ್ಮಶಾನವಾಗಿಹೋಗಿ ಎಷ್ಟೋ ಕಾಲವಾಗಿತ್ತು. ದುರ್ದೈವವೆಂದರೆ ಅದರ ಗತವೈಭವದ ಕುರುಹುಗಳನ್ನೂ ನಿಶ್ಶೇಷವಾಗಿಸಿದ ಭೀಕರ ಸಾಕ್ಷಿಗಳ ದರ್ಶನವನ್ನೂ ಹಾಸ್ಯಭೂಯಿಷ್ಠವಾಗಿ ನಮಗೆ ಮಾಡಿಸುತ್ತಾರೆ. ಹಾಗಾಗಿ ಆ ಶ್ಮಶಾನ ಮತ್ತಷ್ಟು ಭಯಂಕರವಾಗಿ ಕಾಣುತ್ತದೆ. ಒಂದು ಕಾಲದಲ್ಲಿ ವಿದ್ಯಾಕಾಶಿಯಾಗಿದ್ದ ಕ್ಷೇತ್ರವನ್ನು ಸುಡುಗಾಡಾಗಿಸಿದ್ದು ಯುದ್ಧವಲ್ಲ, ಪ್ರಕೃತಿ ವಿಕೋಪವಲ್ಲ – ಮನುಷ್ಯನ ಅರಿಷಡ್ವರ್ಗಗಳ ವಿಲಯತಾಂಡವಕ್ಕೆ ರಾಜಕೀಯ ಶಕ್ತಿ ಸೇರಿದ್ದರಿಂದ ಆದದ್ದು.
ಮೈಸೂರು ಡೈರಿಗೆ ಮುನ್ನುಡಿ ಬರೆದಿರುವ ದಿವಂಗತ ಶ್ರೀ ಹಾ.ಮಾ. ನಾಯಕರೂ ಇದೇ ತೀರ್ಪನ್ನು ಹತಾಶೆ - ದುಃಖ ಮಿಶ್ರಿತ ಧ್ವನಿಯಲ್ಲಿ ನೀಡಿದ್ದಾರೆ. ಅದರ ಜೊತೆಗೆ ಅಸಹಾಯಕತೆಯೂ ಬೆರೆತಿದೆ. ಮೈಸೂರು ವಿಶ್ವವಿದ್ಯಾನಿಲಯದ ಒಡನೆ ಅವರಿಗೆ ಆಜೀವ ನಂಟಿತ್ತೆಂದು, ತಮ್ಮ ಅಂತರಂಗದ ಒಂದು ಭಾಗವೇ ಆಗಿತ್ತೆಂದೂ ಹೇಳಿಕೊಂಡಿದ್ದಾರೆ. ಸ್ವತಃ ಅವರೇ ದೀರ್ಘಕಾಲ ಅಲ್ಲಿ ಅನೇಕ ಉನ್ನತ ಹುದ್ದೆಗಳಲ್ಲಿದ್ದರೂ ಈ ವಿಲಯತಾಂಡವದೆದುರು ಸೋಲಬೇಕಾಯಿತು. ಇದನ್ನು ಈಗ ನೆನೆದರೆ ಅದರ ವಿಧ್ವಂಸಕ ಶಕ್ತಿಯು ಕಲ್ಪನಾತೀತವೆನ್ನುವ ಸತ್ಯದ ಅರಿವಾಗುತ್ತದೆ. ಅಂದರೆ, ಸಮೀಪ ಇತಿಹಾಸಕಾಲದಲ್ಲಿ ನಮ್ಮ ಶೈಕ್ಷಣಿಕ - ಸಾಂಸ್ಕೃತಿಕ - ಸಮಾಜಜೀವನದಲ್ಲಿ ವಾಸ್ತವವಾಗಿ ನಡೆದಂತಹ ದಾರುಣಗಳು ಇಂದು ಊಹಾತೀತವಾಗಿವೆ ಎಂಬ ನಿರ್ಣಯ (conclusion) ಹೊರಡುತ್ತದೆ.
ಮೈಸೂರು ಡೈರಿ ಅನೇಕ ಅರ್ಥಗಳಲ್ಲಿ ಇತಿಹಾಸದ ಆಕಾರ ಸಾಮಗ್ರಿ ಎನ್ನಬಹುದು. ಅದು ಮೈಸೂರು ವಿಶ್ವವಿದ್ಯಾನಿಲಯದ ಮರಣೋತ್ತರ ಪರೀಕ್ಷೆಯ ವರದಿಯೂ ಹೌದು, ಸ್ವಾತಂತ್ರ್ಯೋತ್ತರ ಭಾರತದ ಶೈಕ್ಷಣಿಕ ಪತನದ ಕಿರು ಅಧ್ಯಾಯವೂ ಹೌದು.
ಸೀಮಿತ ಚೌಕಟ್ಟಿನಲ್ಲಿ ಗಮನಿಸುವ ಹಾಗಿದ್ದರೆ, ಮೈಸೂರು ಡೈರಿಗೆ ಒಂದು ಸಂವಾದಿ, ಒಂದು ವಿಸಂವಾದಿ ಆಕರಗಳು ಸಿಗುತ್ತವೆ.
ಇದರ ಸಂವಾದಿ ಗ್ರಂಥವೆಂದರೆ ದಿವಂಗತ ಎಸ್.ಎಲ್. ಭೈರಪ್ಪನವರ ಆತ್ಮಕಥೆ, ಭಿತ್ತಿಯಲ್ಲಿ ಬರುವ ಅವರ ಕಾಲೇಜು ದಿನಗಳ ಅನುಭವಗಳು. ಅಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಹೇಗೆ ಸುಡುಗಾಡಾಯಿತು, ಅದರ ಪ್ರಕ್ರಿಯೆ, ಅದರ ಕಾರಣಕರ್ತರು, ಅವರ ಕ್ಷುದ್ರ ಹುನ್ನಾರಗಳ ವಿಸ್ತೃತ ನಿರೂಪಣೆಯಿದೆ. ಆ ದುರಂತ ಗಾಥೆಗೆ Paradise Lost ಎನ್ನುವುದೇ ಸೂಕ್ತ ಶೀರ್ಷಿಕೆ.
ಮೈಸೂರು ಡೈರಿಯ ವಿಸಂವಾದಿ ಆಕರಗಳ ಪೈಕಿ ಎದ್ದು ಕಾಣುವುದು ದಿವಂಗತ ಏ.ಏನ್. ಮೂರ್ತಿರಾಯರ ಸೊಗಸಾದ ಹಾಗು ಮನಮುಟ್ಟುವ ಲಲಿತಪ್ರಬಂಧ, ಮಹಾರಾಜಾ ಕಾಲೇಜಿನ ಕಾಮನ್ ರೂಮ್. ಅದರಲ್ಲಿ ಮೂರ್ತಿರಾಯರು ಈ Paradiseನ ಒಂದು ಕಿಂಡಿನೋಟ ಮಾತ್ರ ನೀಡಿದ್ದಾರೆ. ಅದರ ಕೊನೆಯ ಭಾಗದಲ್ಲಿ ಒಂದು ಮಾರ್ಮಿಕ ಸತ್ಯವನ್ನು ಅಡಗಿಸಿದ್ದಾರೆ:
“ಕಾಮನ್ ರೂಮಿನಲ್ಲಿದ್ದವರು ಒಬ್ಬೊಬ್ಬರೂ ಇತರರೆಲ್ಲರ ಜೀವನವನ್ನು ರೂಪಿಸಿದವರು. ಅವರಲ್ಲಿ ಯಾರೊಬ್ಬರು ತಮ್ಮ ಆತ್ಮಕಥೆಯನ್ನು ಬರೆದರೂ ಇತರರೆಲ್ಲರ ಕಥೆಯನ್ನು ಬರೆಯದೆ ವಿಧಿಯಿಲ್ಲ… ಉತ್ಸಾಹ, ಬೇಸರ, ಆನಂದ, ಸಂಕಟ – ಎಲ್ಲದರಲ್ಲೂ ಅವರು ಭಾಗಿಗಳಾಗಿದ್ದಾರೆ… ಸತ್ವಪರೀಕ್ಷೆಯ ಕಾಲ ಬಂದಾಗ, ಮನಸ್ಸು ಕೀಳುದಾರಿಯ ಕಡೆಗೆ ಒಲೆದಾಗ, ನನ್ನ ಮಿತ್ರರೇನೆಂದುಕೊಂಡಾರೋ ಎಂಬ ಯೋಚನೆ ನನಗೆ ರಕ್ಷಣೆಯಾಗಿ ಪರಿಣಮಿಸಿದೆ. ಕೆಲವು ದಿವ್ಯೌಷಧಗಳನ್ನು ಒಂದು ಬಾರಿ ಸೇವಿಸಿದರೆ ಅವು ಜೀವಮಾನವೆಲ್ಲಾ ಶರೀರಕ್ಕೆ ಇಂಬುಗೊಡುತ್ತವೆ. ನನ್ನ ಗುರುಗಳ, ಹಿರಿಯರ, ಮಿತ್ರರ ಪ್ರಭಾವವೂ ಇಂಥ ದಿವ್ಯೌಷಧ.”
ಗಮನಾರ್ಹ ಸಂಗತಿಯೆಂದರೆ ಬಿ.ಜಿ.ಎಲ್. ಸ್ವಾಮಿಯವರು ಅದೇ ಕಾಮನ್ ರೂಮ್ ಹಾಗು ಇನ್ನಿತರ ಕಟ್ಟಡ - ಕೊಠಡಿಗಳಿಗೆ ನಾಲ್ಕು ದಶಕಗಳ ನಂತರ ಭೇಟಿಕೊಟ್ಟದ್ದು. ಆಗ ಅವರು ಅಲ್ಲೆಲ್ಲ ಕಂಡ ಆ ಘನಘೋರ ದೃಶ್ಯಗಳ ಬಗೆಗೆ ಅವರ ಮಾತುಗಳಲ್ಲೇ ಮುಂದೆ ನೋಡೋಣ.
ಈ ದೃಶ್ಯಾವಳಿ ಉಲ್ಲೇಖವಾಗಿರುವುದು ಕಲ್ಟುಗಳು ಪಟ್ಟುಗಳು ಎನ್ನುವ ಪ್ರಬಂಧದಲ್ಲಿ. ಅದನ್ನು ಓದಿದಾಗ ನಮ್ಮೊಳಗೆ ಸ್ಫುರಿಸುವ ಜುಗುಪ್ಸೆ, ನಾವು ಸುರಿಸದೇ ಸುರಿಸುವ ರುಧಿರಾಶ್ರು, ಇವೆಲ್ಲ ಕಾಲಕ್ರಮದಲ್ಲಿ ತಮ್ಮ ತೀವ್ರತೆಯನ್ನು ಕಳೆದುಕೊಂಡು ನಮ್ಮನ್ನು ಮಾತ್ತಷ್ಟು ಭಾವಹೀನರನ್ನಾಗಿಸಿಬಿಡುತ್ತದೆ. ಭಾರತದ ಮೊತ್ತಮೊದಲ ಕಮ್ಮ್ಯುನಿಸ್ಟ್ ನಾಯಕ ಹಾಗು ಬುದ್ಧಿಜೀವಿ ಎನಿಸಿಕೊಂಡಿರುವ ಎಂ.ಏನ್. ರಾಯ್ ಕೊಟ್ಟ ಸೂತ್ರವೊಂದಕ್ಕೆ ಈ ಸ್ಥಿತಿ ಅನುಗುಣವಾಗಿದೆ – normalise bad news ಎನ್ನುವುದು ಆ ಸೂತ್ರ. ಅಂದರೆ, ದುರ್ವಾರ್ತೆಯ ಸಾಧಾರಣೀಕರಣ.
ಸ್ವಾಮಿಯವರ ಕಲ್ಟುಗಳು ಪಟ್ಟುಗಳು ಪ್ರಬಂಧದ ಹೆಸರೇ ಸೂಚಿಸುವಂತೆ ಇಲ್ಲಿ ನಾವು ಕಾಣುವುದು ಹೀನ ಗುಂಪುಗಾರಿಕೆಯ ರಾಕ್ಷಸನರ್ತನದ ಅಸಂಖ್ಯ ವರಸೆಗಳನ್ನು. ಈ ಪ್ರಬಂಧವೇ ಮೈಸೂರು ಡೈರಿಯ ಹೃದಯಭಾಗ. ಲೇಖಕರ ವಿಡಂಬನಾ ಕೌಶಲವು ಯಥಾಪ್ರಕಾರ ಇಲ್ಲಿಯೂ ಸೊಗಸಾಗಿ ವಿಜೃಂಭಿಸಿದೆ – ಕಲ್ಟುದೇವತೆಗಳು, ಕಲ್ಟುವಿದ್ವಾಂಸರು, ಕಲ್ಟಾರಾಧನೆ – ಇಂಥ ವಿನೂತನ ಪದಪುಂಜಗಳು ಹೊಟ್ಟೆಬಿರಿಯ ನಗಿಸುತ್ತವೆ. ರುಚಿಗಾಗಿ ಒಂದೆರಡು ಪಂಕ್ತಿಗಳನ್ನು ಉದ್ಧರಿಸಬಹುದು.
“ಮಾನಸಗಂಗೋತ್ರಿ ದೊಡ್ಡದೇ… ಅಲ್ಲಿ ಹುಟ್ಟಿಕೊಂಡಿರುವ ಕಲ್ಟುಗಳ ಸಂಖ್ಯೆಯನ್ನು ಕುರಿತು ಆಶ್ಚರ್ಯವೂ ಆಯಿತು; ಅದಕ್ಕಿಂತಲೂ ಮಿಗಿಲಾಗಿ ದಿಗ್ಭ್ರಮೆಯೂ ಆಯಿತು. ಎರಡು ಕಲ್ಟುಗಳ ನಡುವೆ ಇರುವ ವ್ಯತ್ಯಾಸವೇ ನನಗೆ ಕಾಣದಾಯಿತು… ಒಂದು ಕಲ್ಟನ್ನು ಕಟ್ಟಿ, ಅದನ್ನು ಸಜೀವವಾಗಿಯೋ ನಿರ್ಜೀವವಾಗಿಯೋ ಉಳಿಸಿಕೊಳ್ಳುವ ಪಟ್ಟುಗಳೇ ಇಲ್ಲಿಯ ಪಲ್ಟಿ ಪ್ರದರ್ಶನಗಳು. ಕಲ್ಟುದೇವತೆಗಳಿಗೆ ತೃಪ್ತಿಯೆಂಬುದೇ ತಿಳಿಯದೆಂದು ಕಾಣುತ್ತದೆ. ವರ್ಷಕ್ಕೆ ನಾಲ್ಕೈದು ಸಲವಾದರೂ ಅಖಾಡಕ್ಕೆ ಇಳಿದು ಮಟ್ಟಿಯಾಟವಾಡಿ ದೂಳೆಬ್ಬಿಸಬೇಕು. ಕೆಲವರ ಕಣ್ಣಿನಲ್ಲಿ ಆ ಕಣಗಳು ಹೊಕ್ಕು ಅವರನ್ನು ಕಿರಿಕಿರಿಪಡಿಸಬೇಕು. ಇದು ಕಲ್ಟು ನಿಯಮ.”
ಇಂಥ ಹಲಕೆಲವು ಕಲ್ಟುಗಳ ಕೂಸೇ ಈ ಹೊತ್ತಿನ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು ಎನ್ನುವ ಮತ್ತೊಂದು ವಾಸ್ತವತೆಯೂ ಈ ಪ್ರಬಂಧದಿಂದ ಸ್ಫುರಿಸುತ್ತದೆ.
ಈ ಕಲ್ಟುಗಳ ಅರುಣೋದಯ ಕಾಲದ ಕಥೆಯನ್ನು ಭಿತ್ತಿ, almost ಆಮೂಲಾಗ್ರವಾಗಿ ನಿರೂಪಿಸಿದೆ. ಭೈರಪ್ಪನವರ ವಿದ್ಯಾರ್ಥಿದಶೆಯ ಆರಂಭದಲ್ಲಿ ಕೇವಲ ಬಿ ಮತ್ತು ನಾನ್ - ಬಿ – ಅಂದರೆ ಬ್ರಾಹ್ಮಣ - ಬ್ರಾಹ್ಮಣೇತರವೆಂಬ ಎರಡೇ ವರ್ಗಗಳಿದ್ದವು. ಆದರೆ ಸ್ವಾಮಿಯವರು ಮೈಸೂರು ಡೈರಿ ಬರೆಯುವ ಹೊತ್ತಿಗೆ ಇವು ಲೆಕ್ಕವಿಲ್ಲದಷ್ಟು ಗುಂಪುಗಳಾಗಿ ಆಸ್ಫೋಟಿಸಿದ್ದವು. ಜಾತಿ-ಉಪಜಾತಿ, ಪಂಗಡ-ಉಪಪಂಗಡ, ಬಲಗೈ-ಎಡಗೈ – ಇವೆಲ್ಲಕ್ಕೆ ಸಮಾಜವಾದ, ಸಮತಾವಾದ, ಸಾಮ್ಯವಾದ, ಮಾರ್ಕ್ಸ್ವಾದ, ಲೋಹಿಯಾವಾದ, ಹೀಗೆ ಹತ್ತಾರು ಸೈದ್ಧಾಂತಿಕ ಗುಂಪುಗಳೂ ಸೇರಿದ್ದವು. ಇವೆಲ್ಲಕ್ಕೂ ಬೇರೆಬೇರೆ ಹಂತಗಳಲ್ಲಿ - ಕಾಲಘಟ್ಟಗಳಲ್ಲಿ ಸಮಯಸಾಧಕತನದ ಸಮರ್ಥನೆ ನೀಡಿದ್ದು ನವ್ಯ ಎಂಬ ಅಪ್ಪಟ ರಾಜಕೀಯ ಮನೋವಿಕಾರ.
ಈ ವಿಷಯವನ್ನು ಇನ್ನೂ ಮೂಲಭೂತಸ್ತರದಲ್ಲಿ ವಿಶ್ಲೇಷಿಸಿದಾಗ – ಅಂದರೆ ತಾತ್ವಿಕಸ್ತರದಲ್ಲಿ ಗ್ರಹಿಸಿದಾಗ ತಾತ್ಪರ್ಯ ತಂತಾನೇ ವಿದಿತವಾಗುತ್ತದೆ. ಮೂಲತಃ ಈ ಎಲ್ಲ ಸಿದ್ಧಾಂತಾಭಾಸಗಳ ಬೇರಿರುವುದು ರಾಗದ್ವೇಷಗಳಲ್ಲಿ, ಅವುಗಳಿಂದ ಸಹಜವಾಗಿ ಮೂಡುವ ಅಸಹನೆ - ಅಪ್ರಾಮಾಣಿಕತೆಗಳಲ್ಲಿ. ಇಂಥ “ವಾದ”ಗಳ ಮತ್ತೊಂದು ಪ್ರೇರಕಶಕ್ತಿಯೆಂದರೆ ಆತ್ಮನ್ಯೂನತೆ; ಈ ನ್ಯೂನತೆಯ ಒಂದು ಸ್ಪಷ್ಟವಾದ ಅಭಿವ್ಯಕ್ತಿ ಎಂದರೆ ಪ್ರವಾದಿ ಮಾನಸಿಕತೆ – Psychology of Prophetism ಎನ್ನಬಹುದು. ಈ ಮನಸ್ಥಿತಿಯನ್ನು ಸಾರುವ ಒಂದು ಪ್ರಾತಿನಿಧಿಕ ನವ್ಯ ಕವಿತೆಯೆಂದರೆ ಗೋಪಾಲಕೃಷ್ಣ ಅಡಿಗರ ಕಟ್ಟುವೆವು ನಾವು. ವಸ್ತುತಃ ಇದೊಂದು ಕಮ್ಮ್ಯುನಿಸ್ಟ್ ಯುಧ್ಧಗೀತೆ, ಕಾವ್ಯವಲ್ಲ. ತೆಲುಗಿನ ಕವಿ ಶ್ರೀಶ್ರೀ ಬರೆದ ಇಂಥ ನೂರಾರು ಯುಧ್ಧಗೀತೆಗಳ ಮಾದರಿಯಲ್ಲಿದೆ. ಪ್ರವಾದಿ ಮಾನಸಿಕತೆಯ ಮುಖ್ಯಲಕ್ಷಣಗಳ ಪೈಕಿ ಅಸಹನೆ, ಅಶಿಸ್ತು, ಅನೃತ, ಅಶಾಂತಿ, ನೃಶಂಸೆ, ವಂಚನೆ, ಸ್ವಾರ್ಥ, ಸಮಯಸಾಧಕತೆ ಮತ್ತು ಕಾದುನೋಡಿ ಎರಡುಬಗೆದು ಅಧಿಕಾರ ಹಿಡಿಯುವುದು.
ಹೀಗಾಗಿ ಬಹುಬೇಗ ನವ್ಯರ ಗುಂಪು ಒಡೆದು ಹೋಳಾಯಿತು. ಈ ಇಡೀ ಘಟನಾ ಸರಣಿಯನ್ನು ಅದರ ಒಳಸುಳಿಗಳನ್ನು ಭಿತ್ತಿಯಲ್ಲಿ ಭೈರಪ್ಪನವರು ಅತ್ಯಂತ ಪ್ರಬುದ್ಧವಾಗಿ ವಿಶ್ಲೇಷಿಸಿದ್ದಾರೆ. ಎಷ್ಟೇ ಆಗಲಿ, ಅವುಗಳ ಪ್ರತ್ಯಕ್ಷದರ್ಶಿ ಹಾಗು ಬಾಧಿತರು ಅವರು.
ನವ್ಯಾಸ್ಫೋಟದಿಂದ ಹಾರಿಹೊರಬಿದ್ದ ಅನೇಕ ಕಿಡಿಗಳ ಪೈಕಿ ಬಂಡಾಯ - ದಲಿತ ಮುಖ್ಯವಾದುವು ಎನ್ನುವ ಸಂಗತಿ ಈಗ ಸಾಮಾನ್ಯ ಜ್ಞಾನವಾಗಿದೆ. ಇವರೂ ಸಹ ಸಾಹಿತ್ಯ - ಕವಿತೆಗಳನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡರು. ಅಡಿಗರಿಗಾದರೋ ನಿಜವಾದ ಕಾವ್ಯಪ್ರತಿಭೆಯಿತ್ತು, ಪದಸಂಪತ್ತಿ ಇತ್ತು. ಸಮಾಜಘಾತುಕ ಗೀತೆಗಳನ್ನು ಶಿಷ್ಟ ಭಾಷೆ - ಆಕರ್ಷಕ ಶೈಲಿಯಲ್ಲಿ ರಚಿಸಿದರು. ಆದರೆ ಅದೇ ದುಷ್ಪರಂಪರೆಯ ಮೂಸೆಯಲ್ಲಿ ರೂಪುಗೊಂಡ ಬಂಡಾಯದವರು ತಮ್ಮ ಧ್ಯೇಯವನ್ನು ರಾಜಾರೋಷವಾಗಿ ಸಾರಿದರು. ಅಷ್ಟರ ಮಟ್ಟಿಗೆ ಅದರಲ್ಲಿ ಪ್ರಾಮಾಣಿಕತೆಯಿತ್ತು. ಅದಕ್ಕೆ ಕವಿತೆಯೆಂದು ನಾಮಾಂಕಿತವಾಯಿತು. ಅಂತಹ ಹತ್ತಾರು ಕವಿತೆಗಳನ್ನೇ ಬಿ.ಜಿ.ಎಲ್. ಸ್ವಾಮಿ ಅವರು ಮಾನಸಗಂಗೋತ್ರಿಯಲ್ಲಿ ಅನೇಕ ಕಡೆ, ಹಲವಾರು ಬಾರಿ ಕಣ್ಣಾರೆಕಂಡ ಅನುಭವವನ್ನು ದಾಖಲಿಸಿದ್ದಾರೆ. ಅದರಿಂದ ಆಯ್ದ ಕೆಲವು ಹೀಗಿವೆ:
"೧. ಕಟ್ಟುವೆವು - ಹೊಸಯುಗ
ಕುಟ್ಟುವೆವು - ಹಳೆಯುಗ
೨. ಸುಡು ಸುಡು ಸುಡು
ಜಾತಿ ಜಾತಿ ಜಾತಿ!
ಬಿಡು ಬಿಡು ಬಿಡು
ನಿನ್ನ ಗೋತ್ರ ನಿನ್ನ ಸೂತ್ರ!”
ಈ ಎಲ್ಲದರಲ್ಲಿ ನಮಗೆ ನಿಚ್ಚಳವಾಗಿ ಗೋಚರಿಸುವ ಮಗದೊಂದು ಅಂಶ – ಭೈರಪ್ಪನವರು ಕಾಲೇಜು ಓದುವ ಕಾಲದಲ್ಲಿದ್ದ ಬ್ರಾಹ್ಮಣವಿರೋಧಿ ಚಟುವಟಿಕೆಗಳಿಗೆ ಹಿಂಸೆಯ ಆಯಾಮ ಅಷ್ಟೇನೂ ಇರಲಿಲ್ಲ. ಆದರೆ ಸ್ವಾಮಿಯವರು ಮೈಸೂರಿಗೆ ಪುನರಾಗಮಿಸಿದ ಕಾಲದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ – ವಿಶೇಷತಃ ವಿಶ್ವವಿದ್ಯಾನಿಲಯಗಳಲ್ಲಿ ಬ್ರಾಹ್ಮಣೋಚ್ಛಾಟನೆಯಾಗಿ ಒಂದಿಡೀ ದಶಕವೇ ಕಳೆದಿತ್ತು. ಈಗ ಕದನವೇನಿದ್ದರೂ ವಿವಿಧ ಬ್ರಾಹ್ಮಣೇತರ ಸಮುದಾಯಗಳ ನಡುವೆ. ಇದು ಹಿಂಸಾತ್ಮಕ ರೂಪವನ್ನು ಧರಿಸಿದ್ದರ ಹಿಂದಿರುವ ಪ್ರಮುಖ ಕಾರಣವೆಂದರೆ – ಕಮ್ಮ್ಯುನಿಸ್ಟರು ಗಳಿಸಿಕೊಂಡಿದ್ದ ರಾಜಕೀಯ ಶಕ್ತಿ - ಪ್ರಭಾವ.
ಸ್ಥೂಲವಾಗಿ ಹೇಳುವುದಾದರೆ ೧೯೬೦ರ ದಶಕದ ಮಧ್ಯಭಾಗದಿಂದ ಇಂದಿರಾ ಗಾಂಧಿ ಕಮ್ಮ್ಯುನಿಸ್ಟರ ಕೈಗೊಂಬೆಯಾಗಿ, ನಂತರ ಅವರಿಗೆ ಜವಾಹರ್ಲಾಲ್ ನೆಹರು ವಿಶ್ವವಿದ್ಯಾನಿಲಯವನ್ನು ಬಳುವಳಿಯಾಗಿ ಕೊಟ್ಟ ಬಳಿಕ ಆದ ದೇಶವ್ಯಾಪಿ ದುಷ್ಪರಿಣಾಮ. ಸಹಸ್ರಫಣದಂತೆ ಅದು ಅಸಂಖ್ಯವಾದ ಕರಾಳ ರೂಪಗಳನ್ನು ತಾಳಿತು. ಒಂದೆಡೆ ದೇವರಾಜ ಅರಸರ ಕ್ಷುದ್ರ ಜಾತಿರಾಜಕಾರಣವಾದರೆ ಮತ್ತೊಂದು ಕಡೆ ಅದರೊಳಕ್ಕೆ ನುಸುಳಿ ಅಥವಾ ಅದರಿಂದ ಪರೋಕ್ಷ ಪ್ರಯೋಜನ ಪಡೆದ ಕಮ್ಮ್ಯುನಿಸ್ಟರು ಸೋವಿಯಟ್ ಗುಲಾಮಗಿರಿಯ ಪಾಠಗಳನ್ನು ತಮ್ಮ ವಿದ್ಯಾರ್ಥಿಗಳ ಮಸ್ತಿಷ್ಕದಲ್ಲಿ ತುರುಕಿದರು. ಇದಕ್ಕೆ ದೊಡ್ಡ ಉದಾಹರಣೆ
ಮೈಸೂರು ಡೈರಿಯಲ್ಲಿಯೇ ಸಿಗುತ್ತದೆ. ಯು.ಆರ್. ಅನಂತಮೂರ್ತಿ ತಮ್ಮ ವಿದ್ಯಾರ್ಥಿಗಳಿಗೆ Existentialism, socialism, ಇತ್ಯಾದಿಗಳ ಕುರಿತು ಮೋಡಿಮಾಡುವ ಧಾಟಿಯಲ್ಲಿ ಪಾಠ ಮಾಡುತ್ತಿದ್ದದ್ದನ್ನು ಅವರ ತರಗತಿಯಲ್ಲಿ ಕುಳಿತು ಕೇಳಿಸಿಕೊಂಡಿದ್ದರು ಸ್ವಾಮಿ.
ಇಂಥ ಎಲ್ಲ ಪಾಠಗಳ ಪ್ರಾಯೋಗಿಕ ಮುಖವೆಂದರೆ ಸಂಘಟಿತ ಹಿಂಸಾಚಾರ – organised violence. ಇಂಥ ಅನೇಕ ಹಿಂಸಾಕಾಂಡಗಳನ್ನು ಸ್ವಾಮಿಯವರು ಅಲ್ಲಿದ್ದ ಒಂದು ವರ್ಷದ ಅವಧಿಯಲ್ಲಿ ಕಂಡದ್ದು. ಮಾತ್ರವಲ್ಲ, ಇಂಥ ಹಿಂಸಾಕಾಂಡಗಳ ನೀಲಿನಕ್ಷೆ ತಯಾರಾಗುತ್ತಿದ್ದದ್ದು ಅಧ್ಯಾಪಕರ ಮನೆಗಳಲ್ಲಿ ಅಥವಾ ಅವರುಗಳು ತಮ್ಮ ಆಪ್ತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪಾನಗೋಷ್ಠಿಗಳಲ್ಲಿ. ಆದರೆ ಅಂತತಃ ಹಿಂಸಾಚಾರವನ್ನು ಬೀದಿಗಳಲ್ಲಿ ಅನುಷ್ಠಾನ ಮಾಡುತ್ತಿದ್ದದ್ದು ಮಾತ್ರ ವಿದ್ಯಾರ್ಥಿಗಳೇ. ಈ ಬಗ್ಗೆ ಸ್ವಾಮಿಯವರ ಪುಸ್ತಿಕೆಯನ್ನು ಈಗ ಓದಿದರೂ ಎದೆ ಝಲ್ ಎನ್ನುತ್ತದೆ. ರೇಜಿಗೆ - ಅಸಹ್ಯ ಹುಟ್ಟುತ್ತದೆ.
“ಅಧ್ಯಾಪಕ ವರ್ಗದ ಕೆಲವರು ತಮ್ಮವೇ ರೀತಿಯ ಖಾಸಗಿ ದರ್ಬಾರುಗಳನ್ನು ನಡೆಸುತ್ತಾರೆ. ಅವರವರ ಪಟ್ಟ ಶಿಷ್ಯರನ್ನು ಮನೆಗೋ ಹೋಟೆಲಿಗೋ ಕರೆದುಕೊಂಡುಹೋಗಿ ಶೈತ್ಯೋಪಚಾರ ಶಾಖೋಪಚಾರಗಳಿಂದ ಸಂತೈಸಿ ‘ಏನು ಕ್ಯಾಂಪಸ್ಸಿನಲ್ಲಿ ಈ ವರ್ಷ ಎಲ್ಲವೂ ಶಾಂತವಾಗಿಯೇ ಇದ್ದುಬಿಟ್ಟಿದೆಯಲ್ಲ! ವರ್ಷಪೂರ ಹೀಗೆಯೇ ಇರಗೊಡುವಿರಾ?’ ಎಂದು ಮೂದಲಿಸಿ ಮುಂದೆ ನಡೆಯಬೇಕಾದ ಕಾರ್ಯಗಳನ್ನು ಕುರಿತು ಮಂತ್ರ ತಂತ್ರಾಲೋಚನೆ ನಡೆಸುತ್ತಾರೆ… ದೂರುಗಳ ಪಟ್ಟಿಯೊಂದು ಸಿದ್ಧವಾಗುತ್ತದೆ… ಅದರ ಕುರಿತಾದ ಚರ್ಚೆ ಮಾನಸಗಂಗೋತ್ರಿಯ ವಾತಾವರಣವನ್ನು ತುಂಬುತ್ತದೆ… ಆಧುನಿಕ ಜನಪ್ರಿಯ ಸ್ವಚ್ಛ ಕನ್ನಡದಲ್ಲಿ ಕಟ್ಟಡ ಗೋಡೆಗಳ ಮೇಲೂ ಟಾರ್ ರಸ್ತೆಗಳ ಮೇಲೂ ಸಾರ್ವಜನಿಕರಿಗೆ ತಿಳಿವಳಿಕೆ ಕೊಡುತ್ತವೆ… ಚಳವಳಿ [ಶುರುವಾಗುತ್ತವೆ]... ಇದು ತುಂಬ ಅಪಾಯದ ಪರ್ವ.”
ಈ ನಿರಂತರ ಚಳುವಳಿ - ಗಲಾಟೆ - ಆಂದೋಲನದ ಪರ್ವ ಎಲ್ಲಿಯವರೆಗೆ ಹೋಯಿತೆಂದರೆ ಆ ಕಾಲದಲ್ಲಿ ಮಹಾರಾಜಾ ಕಾಲೇಜಿಗೆ ಮಹಾರಜಾ ಕಾಲೇಜ್ ಎಂಬ ಅಡ್ಡಹೆಸರು ಬಂತು.
ಪರಿಸ್ಥಿತಿ ಈ ಪ್ರಪಾತ ತಲುಪುವುದರ ಮುನ್ಸೂಚನೆ ಭಿತ್ತಿಯಲ್ಲಿ ಸಿಗುತ್ತದೆ. ಭೈರಪ್ಪನವರ ಬಿ.ಎ. - ಎಂ.ಎ. ಕಾಲದ ಜಾತಿರಾಜಕೀಯವು ಬಳಸಿಕೊಂಡ ಮುಖ್ಯ ತಂತ್ರಗಳೆಂದರೆ: ಶೈಕ್ಷಣಿಕ ಅಧಿಕಾರಸ್ಥಾನಗಳಿಗೆ ಸ್ವಜಾತಿ ಪಕ್ಷಪಾತ, ಅರ್ಹರ ದಮನ, ಅನರ್ಹರ ಧಿಡೀರ್ ಭಡ್ತಿ, “ಶತ್ರು” ಜಾತಿಜನರ ವಿರುದ್ಧ ಪಿತೂರಿ, “ಬ್ರಾಹ್ಮಣ” ಎಂದು ಗುರುತಿಸಿಕೊಂಡಿರುವ ಜ್ಞಾನಶಾಖೆಗಳನ್ನು ಮುಚ್ಚಿಹಾಕುವುದು, ಇತ್ಯಾದಿ. ಇಂಥ ತಂತ್ರಗಳು ವಿದ್ಯಾರ್ಥಿಗಳ ವಿರುದ್ಧವೂ ಪ್ರಯೋಗವಾಗುತ್ತಿದ್ದವು. ಸ್ವತಃ ಭೈರಪ್ಪನವರೇ ಈ ಹುನ್ನಾರಗಳ ಬಲಿಪಶು ಆಗಿದ್ದವರು.
ಆ ಅವಧಿಯಲ್ಲಿ ನಿಧಾನವಾಗಿ – ಆದರೆ ಸರಿಪಡಿಸಲಾರದಂತಹ ಮತ್ತೊಂದು ಬೆಳವಣಿಗೆ ಎಂದರೆ ಅಧ್ಯಾಪಕರು ತಮಗೆ ಮಾತ್ರ ವಿಧೇಯರಾದಂಥ ವಿದ್ಯಾರ್ಥಿಗಳ ಗುಂಪುಗಳನ್ನು ನಿರ್ಮಾಣ ಮಾಡಿದ್ದು. ಇದೇ ಮುಂದೆ ಪೆಡಂಭೂತವಾಗಿ ಬೆಳೆದು ಬಿ.ಜಿ.ಎಲ್. ಸ್ವಾಮಿ ಹೇಳುವ ಅಧ್ಯಾಪಕ ವರ್ಗದ ಖಾಸಗಿ ದರ್ಬಾರುಗಳಾಗಿ ಮಾರ್ಪಟ್ಟಿದ್ದು.
ಮೈಸೂರು ವಿಶ್ವವಿದ್ಯಾನಿಲಯದ ಸರ್ವಾಂಗೀಣ ಅಧಃಪತನದ ಈ ಕಿರು ಸಮೀಕ್ಷೆಯ ಮತ್ತಷ್ಟು ತಿರುಳುಗಳನ್ನು ಈಗ ಗಮನಿಸಬಹುದು.
ಈ ಅಧಃಪತನವು ನಿಸ್ಸಂದೇಹವಾಗಿ ಕಾಂಗ್ರೆಸ್ ಮತ್ತು ಎಡಪಂಥೀಯರು ಹೆಣೆದ ಕ್ಷುದ್ರ ಜಾತಿರಾಜಕಾರಣದ ಕೌರವಶಿಶು. ಇಂಥ ರಾಜಕಾರಣದ ಬೇರುಗಳಿರುವುದು ಆರ್ಯ - ದ್ರಾವಿಡ ಮಿಥ್ಯಾಪುರಾಣದಲ್ಲಿ. ಮುಂದೆ ಅದು Justice Party, ಪ್ರಜಾ ಮಿತ್ರ ಮಂಡಳಿ, ಇತ್ಯಾದಿ ರೂಪ ತಾಳಿದ ಕಥೆ ಜನಜನಿತ.
ಮೈಸೂರಿನಲ್ಲಿ ಈ ರಾಜಕಾರಣದ ಪ್ರಪ್ರಥಮ ಹಾಗು ಅತ್ಯಂತ ಧೀಮಂತ ಬಲಿಪಶು - ದಿವಾನ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಅದೇ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪಕರು. ಅವರ ನಿಷ್ಕ್ರಮಣವಾದ ಕೆಲ ವರ್ಷಗಳ ಬಳಿಕ ಜಸ್ಟಿಸ್ ಪಾರ್ಟಿಯ ಭಕ್ತರಾದ ಸೀ.ಆರ್. ರೆಡ್ಡಿ, ಇತ್ಯಾದಿಗಳ ನೇತೃತ್ವದಲ್ಲಿ ಬೀಜಾಂಕುರವಾದ ಬ್ರಾಹ್ಮಣ ವಿರೋಧಿ ಚಳುವಳಿಗಳ ಪರ್ಯವಸಾನವೇ ಮೈಸೂರು ಡೈರಿಯಲ್ಲಿ ನಾವು ಕಾಣುವ ಮಾಹಾರಾಜ ಕಾಲೇಜು - ಮಾನಸಗಂಗೋತ್ರಿಯ ಜ್ಞಾನದಗ್ಧ ಶ್ಮಶಾನ.
ಸ್ವಾತಂತ್ರ್ಯಾನಂತರ ಈ ಆರ್ಯ-ದ್ರಾವಿಡ ಪ್ರೇರಿತವಾದ ಜಾತಿ - ಪ್ರಾಂತೀಯ ರಾಜಕೀಯಕ್ಕೆ ಚರಮಗೀತೆ ಹಾಡುವ ತುರ್ತಿತ್ತು. ಅದಕ್ಕೆ ಅವಕಾಶವೂ ವಿಪುಲವಾಗಿತ್ತು. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ಬ್ರಿಟಿಷರಿಗಿಂತ ನೀಚರೀತಿಯಲ್ಲಿ ನಡೆದುಕೊಂಡಿತು. ಅದರ ಒಡೆದಾಳುವ ದುರ್ನೀತಿಯ ಬೇಗೆಯು ಅತ್ಯಂತ ಪ್ರಖರವಾಗಿ ತಟ್ಟಿದ್ದು ಪೂರ್ವೋತ್ತರ ಭಾರತದ ಕಾಲೇಜುಗಳಿಗೆ, ವಿಶ್ವವಿದ್ಯಾನಿಲಯಗಳಿಗೆ. ಆ ಕಾಲದ ಕೋಲ್ಕತ್ತಾ, ಜಾಧವಪುರ್, ಪಟ್ನಾ, ಲಕ್ನೋ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಗಳು ದಶಕಗಳುದ್ದಕ್ಕೂ ಅಕ್ಷರಶಃ ಹತ್ತು ಉರಿದವು. ಅವುಗಳಿಗೆ ಹೋಲಿಸಿದಾಗ ಮೈಸೂರು ವಿಶ್ವವಿದ್ಯಾನಿಲಯದ ಸ್ಥಿತಿ ಕೊಂಚ ಮಟ್ಟಿಗೆ ಸಹ್ಯವಾಗಿತ್ತೆಂದೇ ಹೇಳಬಹುದು. ಇಲ್ಲಿ ನಾನು ಕೊಟ್ಟಿರುವ ಉಪಮೆ ಅಮೃತಕ್ಕೂ ವಿಷಕ್ಕೂ ಅಲ್ಲ; ವಿಷಕ್ಕೂ ಹಾಲಾಹಲಕ್ಕೂ ಕೊಟ್ಟಿರುವುದು.
ಒಂದಿಷ್ಟೂ ಉತ್ಪ್ರೇಕ್ಷೆಯಿಲ್ಲದೆ ಹೇಳುವುದಾದರೆ “ಸ್ವತಂತ್ರ” ಭಾರತದ ಸರ್ವಾಂಗೀಣ ಪತನಕ್ಕೆ ರಾಜಕಾರಣಿಗಳಿಗಿಂತ ಮಿಗಿಲಾಗಿ ಅಧ್ಯಾಪಕರೇ ಹೇತುವಾಗಿದ್ದಾರೆ.
ಇಲ್ಲಿಯ ತನಕ ನಾವು ಅವಲೋಕಿಸಿದ್ದು ಮೈಸೂರು ವಿಶ್ವವಿದ್ಯಾನಿಲಯದ ಪತನದ ಹೊರಮೈ, ಅದರ ವಿವಿಧ ಅಂಗಗಳನ್ನಷ್ಟೇ. ಆದರೆ ನಿಜವಾದ ಕ್ಷತಿಯೆಂದರೆ ಅದರ ಆತ್ಮನಾಶ. ಅಂದರೆ ಜ್ಞಾನ ಸಂಹಾರ.
ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣಕಾಲ ಅದರ ಪ್ರಸವದಲ್ಲೇ ಜನಿಸಿತೆಂದರೆ ಅತಿಶಯೋಕ್ತಿ ಅಲ್ಲ. ವ್ಯಾಪಕಾರ್ಥದಲ್ಲಿ ಗಮನಿಸಿದಾಗ ಅದರ ಸ್ಥಾಪನೆಯು ಇತಿಹಾಸದ ಸುಂದರ ಅನಿವಾರ್ಯತೆಗಳಲ್ಲೊಂದು. ಮುಮ್ಮಡಿಯವರು ಅಂಕುರಾರ್ಪಣೆ ಮಾಡಿದ ಸಾಂಸ್ಕೃತಿಕ ಪುನರುತ್ಥಾನದ ಹೆಮ್ಮೆಯ ಭವಿಷ್ಯ ಕಾಲದ ಶಿಶು ಮೈಸೂರು ವಿಶ್ವವಿದ್ಯಾನಿಲಯ. ಇನ್ನೊಂದು ದೃಷ್ಟಿಯಿಂದ, ಅದು ಕಷ್ಟಕಾಲದಲ್ಲಿ ಒಸರಿದ ಧೀರಸಂಕಲ್ಪಬಲದ ಸಾಕ್ಷಾತ್ಕಾರವೂ ಹೌದು. ಅದರ ಸಾಧನೆಗಳೇ ಅದರ ಸುವರ್ಣ ಅಧ್ಯಾಯಕ್ಕೆ ಚಿರಕಾಲದ ಸಾಕ್ಷಿ. ಅದನ್ನು ಸಾಧಿಸಿಕೊಟ್ಟ ಪಂಕ್ತಿಪಾವನರು ಚಿರಂಜೀವಿಗಳು.
ಉದಾರವಾಗಿ ಹೇಳುವುದಾದರೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣಯುಗವು ಅದು ಸ್ಥಾಪಿತವಾದ ವರ್ಷದಿಂದ ಮೊದಲ್ಗೊಂಡು ಕುವೆಂಪು ಅವರ ಅವಧಿಯ ತನಕ ಎನ್ನಬಹುದು. ಕನ್ನಡ ಸಾಹಿತ್ಯದ ಇತಿಹಾಸದ ಪರಿಭಾಷೆಯಲ್ಲಿ ಈ ಯುಗವು ನವೋದಯದಿಂದ ನವ್ಯರ ವರೆಗಿನ ಅವಧಿ. ಇನ್ನೂ ಬೊಟ್ಟು ಮಾಡಿ ಹೇಳೋದಾದರೆ ಅದು ಎಂ. ಹಿರಿಯಣ್ಣನವರ ಕೃತಯುಗದಿಂದ ಯು.ಆರ್. ಅನಂತಮೂರ್ತಿಯವರ ಕಲಿಯುಗದ ವರೆಗಿನ ಅಂತರ. ಅರ್ಧ ಶತಾಬ್ದಕ್ಕೂ ಮಿಗಿಲಾಗಿ ಕನ್ನಡನಾಡಿನ ಸಾಂಸ್ಕೃತಿಕ ದಿಗ್ಗಜರ ಮಹಾಪೂರ ಹರಿದುಬಂದದ್ದು ಈ ಮಾನಸಗಂಗೋತ್ರಿಯಿಂದಲೇ. ಇದನ್ನು ನೆನೆದಾಗ, ಇದರಲ್ಲಿ ನೆಂದಾಗ, ಅದರ ಮೂಲಸೆಲೆ ಎಷ್ಟು ಪವಿತ್ರವಾಗಿತ್ತು, ಎಂತಹ ಜೀವೋತ್ಕರ್ಷಕವಾಗಿತ್ತು ಎಂಬ ಅರಿವಾಗುತ್ತದೆ.
ಹಿಂದೆಯೇ ಹೇಳಿದಂತೆ, ಆ ಯುಗದ ಆಹ್ಲಾದಕರ - ಆಕರ್ಷಕ ಕಿಂಡಿನೋಟವನ್ನು ಏ.ಏನ್. ಮೂರ್ತಿರಾಯರು ನೀಡಿದ್ದಾರೆ. ಎಂದರೆ ಅದರ ಬಗೆಗೆ ಅವರೊಳಗಿದ್ದ ಅಭಿಮಾನ, ಆದರ, ಪ್ರೀತಿ ಹಾಗು ಧನ್ಯತಾಭಾವಗಳಿಗೆ ದ್ಯೋತಕ ಅವರ ಲಲಿತಪ್ರಬಂಧ. ಮೂರ್ತಿರಾಯರ ಹೊರತಾಗಿ ಆ ಯುಗದ ಅನೇಕ ಮಂದಿ ಜನ ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಪಾರ್ಶ್ವಗಳ ಕುರಿತು ರಸವತ್ತಾಗಿ, ಸೊಗಸಾಗಿ, ಆರ್ದ್ರವಾಗಿಯೂ ಬರೆದಿದ್ದಾರೆ. ಪ್ರಭುದ್ಧ ಕರ್ಣಾಟಕದ ಹಳೆಯ ಸಂಚಿಕೆಗಳನ್ನು ಈಗ ಓದುವಾಗಲೂ ಈ ಜ್ಞಾನವಾರಾಣಸಿಯ ಸಾಧನೆಗಳ ಅಗಾಧತೆಯು ನಮ್ಮನ್ನು ಮೂಕರನ್ನಾಗಿಸುತ್ತದೆ. ಹಾಗೆ ನೋಡಿದರೆ, ಪ್ರಬುದ್ಧ ಕರ್ಣಾಟಕ ವೇ ಮೈಸೂರು ವಿಶ್ವವಿದ್ಯಾನಿಲಯದ ಕೀರ್ತಿಕಿರೀಟಗಳಲ್ಲೊಂದು.
ಇಂಥ ಅನೇಕ ಕೀರ್ತಿ - ಪ್ರತಿಷ್ಠೆಗಳಿಗೆ ಒಂದು ಮುಖ್ಯ ಕಾರಣ ಅಲ್ಲಿದ್ದ ವಾತಾವರಣ. ಪ್ರತ್ಯೇಕವಾಗಿ ಅದರ ಕುರಿತಾಗಿಯೇ ಮಾಜೀ ವಿದ್ಯಾರ್ಥಿಗಳು ಬರೆದಿರುವ ಅಪಾರವಾದ ಲೇಖನ ಸಂಪತ್ತಿದೆ. ಈ ಸಂಪತ್ತಿನಲ್ಲಿ ನಿರ್ವಿವಾದವಾಗಿ ಕಂಡುಬರುವ ಅಂಶವೆಂದರೆ ಆ ಕಾಲದ ಅಧ್ಯಾಪಕ - ಪ್ರಾಧ್ಯಾಪಕರ ಹಿರಿಮೆ, ಗರಿಮೆ, ಪಾಂಡಿತ್ಯದ ಸ್ತರ. ಆ ವಿದ್ಯಾರ್ಥಿಗಳಿಗೆ celebrityಗಳೆಂದರೆ ಇಂಥ ಗುರುಗಳೇ. ರಾಲೋ, ಮಾಕಿಂತೋಷ್, ವಾಡಿಯಾ, ರಾಧಾಕೃಷ್ಣನ್, ವೆಂಕಣ್ಣಯ್ಯ, ಎಸ್.ವಿ. ರಂಗಣ್ಣ, ಡಿ.ಎಲ್. ನರಸಿಂಹಾಚಾರ್, ಬಿ.ಎಂ.ಶ್ರೀ, ಎಸ್. ಶ್ರೀಕಂಠಶಾಸ್ತ್ರಿ… ಇವರ ತರಗತಿಗಳು ಸದಾ ಕಿಕ್ಕಿರಿದಿರುತ್ತಿದ್ದವು. ಸೈನ್ಸ್ ತರಗತಿಗಳ ವಿದ್ಯಾರ್ಥಿಗಳು ತಮ್ಮ ಪಿರಿಯಡ್ ಬಿಟ್ಟು ಇಂಥ ಮೇರು ಪ್ರಾಧ್ಯಾಪಕರನ್ನು ಆಲಿಸಲು ಮುಗಿಬೀಳುತ್ತಿದ್ದರು. ಕ್ಲಾಸ್ ರೂಮಿನ ಆಚೆ ನಿಂತು ಕಿಟಕಿಗಳಿಂದ ಹೇಗೋ ಇಣುಕಿ ಉಪನ್ಯಾಸವನ್ನು ಕೇಳುತ್ತಿದ್ದರು.
ಈ ವಾತಾವರಣದ ಕುರಿತು ಮೂರ್ತಿರಾಯರ ಮಾತುಗಳನ್ನು ಓದಿದಾಗ ಅಸೂಯೆ, ಖೇದ, ಕ್ರೋಧಗಳು ಪರಸ್ಪರ ಸ್ಪರ್ಧೆ ಹೂಡಿ ನಮ್ಮೊಳಗೆ ಒಸರುತ್ತವೆ.
“ನಮ್ಮ ಹಿರಿಯ ಗುರುಗಳು… ಈ ಭೂಮಿಯನ್ನು ಎಂಟು ಮೂಲೆಗಳಲ್ಲೂ ಹೊತ್ತು ನಿಂತಿರುವ ಅಷ್ಟ ದಿಗ್ಗಜಗಳಂತೆ. ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟು ಅಲೆಯುವವರಲ್ಲ… ವೃತ್ತಿಗೂ ವೈಯಕ್ತಿಕ ಆನಂದಗಳಿಗೂ ಎಂದೂ ಘರ್ಷಣೆ ಬಂದದ್ದಿಲ್ಲ. ಕರ್ತವ್ಯ ದೃಷ್ಟಿಯನ್ನು ದೊಡ್ಡದಾಗಿ ಮುಂದಿಟ್ಟುಕೊಳ್ಳದೆಯೇ ಕರ್ತವ್ಯದ ಸಾಧನೆಯಾಗುತ್ತಿತ್ತು. ಹತ್ತು ಜನ ಸೇರಿ ಪಾತ್ರಗಳನ್ನು ಹಂಚಿಕೊಂಡು ನಾಟಕವನ್ನೋದುವುದು, ಕುವೆಂಪು ಅವರಂಥ ತರುಣ ಕವಿಗಳ ಕವನಗಳನ್ನು ಓದಿಸಿ ಕೇಳುವುದು… ಪುಸ್ತಕಗಳನ್ನು ಪರಿಶೀಲಿಸುವುದು – ಇವೆಲ್ಲಾ ಕರ್ತವ್ಯವೋ, ಆನಂದವೋ? [...]
“ಅಸ್ತ್ರಗಳ ಉಪದೇಶವನ್ನು ನಾವು ಪಡೆದದ್ದು ಒಂದು ಕಡೆ ಭರತ ಋಷಿಗಳಿಂದ, ಮತ್ತೊಂದು ಕಡೆ ಗ್ರೀಕರ ಆರಿಸ್ಟೋಟಲಿನಿಂದ. ಅವುಗಳಿಗೆ ನಾವು ಧಾರೆಯೆರೆದ ಪುಣ್ಯವು ಷೇಕ್ಸ್ಪಿಯರ್, ಈಸ್ಕಿಲಸ್, ಕಾಳಿದಾಸ, ಭವಭೂತಿ, ಮೊದಲಾದವರನ್ನು ವ್ಯಾಸಂಗಮಾಡಿ ಪಡೆದದ್ದು…
“ಆಗ ಪಾಂಡಿತ್ಯವನ್ನು ಸಂಪಾದಿಸಿದ್ದರೆ ಅದು ಕಣ್ಣೀರಿನಲ್ಲಿ ಕೈತೊಳೆದು ಸಂಪಾದಿಸಿದ್ದಲ್ಲ. ಮಕ್ಕಳು ಆಟವಾಡುತ್ತಲೇ ಪ್ರಪಂಚದ ಜ್ಞಾನವನ್ನು ಪಡೆಯುವಂತೆ ನಾವು ದಕ್ಕಿದಷ್ಟು ಪಾಂಡಿತ್ಯ ಪಡೆದೆವು.
“ಎಲ್ಲಾ ಕೆಲಸಗಳ ಜೊತೆಗೆ… ಹರಟೆಯೂ ತಿಂಡಿಪೋತತನವೂ ಅವ್ಯಾಹತವಾಗಿ ನಡೆದವು. [ನಮ್ಮನ್ನು] ಹೆಂಡಕುಡುಕರಿಗೆ ಹೋಲಿಸಿದವರ ಮಾತು ತೀರ ಅಸತ್ಯವಲ್ಲ. ಆದರೆ ಈ ಮದ್ಯ ವಿಶೇಷರೀತಿಯಲ್ಲಿ ತಯಾರಾದದ್ದು. ತ್ಯಾಗರಾಜರ ಮಾತು, ದೀಕ್ಷಿತರ ಕೃತಿಗಳು, ಈಸ್ಕಿಲಸ್ಸನ ಮತ್ತು ಷೇಕ್ಸಪಿಯರನ ನಾಟಕಗಳು – ಇಂಥ ಸರಕುಗಳನ್ನು ಸೇರಿಸಿ ಭಟ್ಟಿ ಇಳಿಸಿದ್ದು, ಈ ಮದ್ಯ. ಅದನ್ನು ಕುಡಿದು ಓಲಾಡುವ ಅಭ್ಯಾಸ ಇನ್ನೂ ನಮ್ಮಲ್ಲಿ ನಿಂತಿದೆ…”
ಮೂರ್ತಿರಾಯರು ವರ್ಣಿಸಿರುವ ಈ ದಿವ್ಯ ಆವರಣವನ್ನು ಬಿ.ಜಿ.ಎಲ್. ಸ್ವಾಮಿ ಪುನಃ ಹೊಕ್ಕಾಗ ಅವರಿಗೆ ಕಂಡ ವಾತಾವರಣ ಇದು:
“ಟಿ.ಎಸ್.ವಿ., ಬಿ.ಎಂ.ಎಸ್., ಎಸ್.ವಿ.ಆರ್., ಟಿ.ಎನ್.ಎಸ್., ಡಿ.ಎಲ್.ಎನ್. ಮೊದಲಾದವರು ಅಧ್ಯಾಪಕ ವೃತ್ತಿಯಲ್ಲಿ ತೊಡಗಿದ್ದ ಸಮಯದಲ್ಲೊಂದು ಸಲ ಮಹಾರಾಜಾ ಕಾಲೇಜಿನ ಕ್ಲಾಸ್ರೂಮುಗಳಲ್ಲೂ, ಉಪಾಧ್ಯಾಯರ ಕೊಠಡಿಗಳಲ್ಲೂ ನಡೆದಾಡಿದ್ದೆ. ನಲವತ್ತು ವರ್ಷಗಳ ತರುವಾಯ ಆ ಕಾಲೇಜನ್ನು ಹಾದುಹೋದಾಗ ಒಂದು ವಿಧವಾದ ನಾಸಿಯಾ (nausea) ಹಿಡಿಯಿತು…
“ಮುಖ್ಯದ್ವಾರವನ್ನು ಹೊಕ್ಕಾಗ ಮೊದಲು ನನ್ನ ಕಣ್ಣಿಗೆ ಬಿದ್ದ ದೃಶ್ಯ ಸ್ವಲ್ಪ ದಿಗ್ಭ್ರಮೆ ತಂದಿತು. ಮಹಡಿಮೆಟ್ಟಲಿನ ಮರೆಯಲ್ಲಿ ಕೆಳಸಿಬ್ಬಂದಿಗೆ ಸೇರಿದ ನಾಲ್ಕೈದು ಮಂದಿ ಬೀಡಿಸೇದುತ್ತ ಇಸ್ಪೀಟು ಆಡುತ್ತಿದ್ದರು. ನನ್ನನ್ನು ಗಮನಿಸಿದರೂ ಗಮನಿಸದಂತೆ ಆಟದಲ್ಲಿ ಮಗ್ನರಾದರು. [...]
“ಇಂಗ್ಲಿಷ್ ಲೆಕ್ಚರರ್ ಹಾಲ್ ಎದುರಾಯಿತು. ಒಳಗೆ ಮನುಷ್ಯರಾರೂ ಇರಲಿಲ್ಲ. ಹಿಂದೆ ಪ್ರಾಧ್ಯಾಪಕರಾಗಿದ್ದ ರಾಲೋ ಅವರ ಭಾವಚಿತ್ರ ಗೋಡೆಯ ಮೇಲೆ ಕಿತ್ತುಹೋದ ಕಂಬಿಯಿಂದ ತಲೆಕೆಳಗಾಗಿ ತೂಗಾಡುತ್ತಿತ್ತು. ಎರಡು ಹಸುಗಳು ಹಾಯಾಗಿ ಮೆಲುಕುಹಾಕುತ್ತ ಸಗಣಿ ಹಾಕಿದ್ದವು. ಪಕ್ಕದ ರೂಮಿನ ಬಾಗಿಲ ಬಳಿ ಬರುವುದಕ್ಕೆ ಸರಿಯಾಗಿ ಒಳಗಿನಿಂದ ಕತ್ತೆಯೊಂದು ಹೊರಕ್ಕೆ ಬಂದು, ತನ್ನ ಹಿಂಭಾಗದಿಂದ ನನ್ನನ್ನು ತಿವಿದು ಹೊರಟುಹೋಯಿತು.”
ಮೂರ್ತಿರಾಯರ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರ ಪಾಠಪ್ರವಚನಗಳಿಂದ ತಮ್ಮ ಜ್ಞಾನದಾಹವನ್ನು ತಣಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಪೀಳಿಗೆಯಿತ್ತು. ಅಲ್ಲಿಂದ ಹಿಡಿದು ಜಾತಿಗೊಂದು ಕೋಣೆ ಮಾಡಿಕೊಂಡು ತಮ್ಮತಮ್ಮ ಅಧ್ಯಾಪಕರ ಭ್ರಷ್ಟತೆಗೆ ಇಂಧನವಾಗಿ, ಹಿಂಸಾಚಾರ, ಸಾರ್ವಜನಿಕ ವಿಧ್ವಂಸ ಮಾಡುವ ಪೀಳಿಗೆಯು ವಿಜೃಂಭಿಸಲು ಹೆಚ್ಚು ಸಮಯ ಬೇಕಾಗಲಿಲ್ಲ.
ಮೂರ್ತಿರಾಯರು ಚಿತ್ರಿಸಿರುವ ಮಹಾರಾಜಾ ಕಾಲೇಜಿನ ವಾತಾವರಣ ೧೯೩೦ನೇ ದಶಕಕ್ಕೆ ಸೇರಿದ್ದು. ಭೈರಪ್ಪನವರು ಹುಟ್ಟಿದ್ದು ೧೯೩೧ರಲ್ಲಿ. ಅವರು ಬಿ.ಎ. ಸೇರಿದ ವರ್ಷ ೧೯೫೦-೫೧. ಆ ಹೊತ್ತಿಗಾಗಲೇ ವೆಂಕಣ್ಣಯ್ಯ ಇತ್ಯಾದಿ ದಿಗ್ಗಜರ ತಲೆಮಾರಿನ ಅಧ್ಯಾಪಕರು ಕಣ್ಮರೆಯಾಗಿದ್ದರು. ಆ ಪರಂಪರೆಯಲ್ಲಿ ಶಿಕ್ಷಣ ಪಡೆದಿದ್ದ ವಿದ್ವಾಂಸರ ಸಂಖ್ಯೆ ಕ್ಷೀಣಿಸಿದ್ದು ಮಾತ್ರವಲ್ಲದೆ ಅಳಿದುಳಿದವರು ಪೂರ್ತಿ ಮೂಲೆಗುಂಪಾಗಿದ್ದರು. ಎಂ. ಹಿರಿಯಣ್ಣಾದಿಗಳಂತೆ ಮೂಲಗ್ರಂಥಗಳ ಮೇಲೆ ಸ್ವಾಧೀನವಿಟ್ಟುಕೊಂಡಿದ್ದವರು ನಶಿಸಿಹೋಗಿದ್ದರು. ಈ ಶೋಚನೀಯ ಸ್ಥಿತಿಗೆ ಭಿತ್ತಿಯಲ್ಲಿ ಪ್ರಮಾಣಭೂತವಾದ ಸಾಕ್ಷಿಗಳಿವೆ. ಅದರಿಂದ ಪ್ರಾತಿನಿಧಿಕವಾಗಿ ಎರಡು ಉದಾಹರಣೆ ಕೊಡಬಹುದು.
ತತ್ತ್ವಶಾಸ್ತ್ರದಲ್ಲಿ ಸಾಧಿಕಾರಿಕ ವಿದ್ವತ್ತೆಯನ್ನು ಪಡೆದಿದ್ದ ಎಚ್.ಕೆ. ರಾಜಾರಾಯರಿಗೆ ಅವರು ಬ್ರಾಹ್ಮಣರೆಂಬ ಕಾರಣಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಅನ್ಯಾಯ ಮಾಡಿತ್ತು. ಪರಿಣಾಮ: ಅವರಲ್ಲಿ ತೀವ್ರ ಕಹಿ ಮೂಡಿ ತಮ್ಮ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠವೇ ಹೇಳಲಿಲ್ಲ. ಜ್ಞಾನನಾಶ ಹೀಗೇ ಆಗಬೇಕೆನ್ನುವ ಯಾವ formulaವೂ ಇಲ್ಲ.
ಇಂಥದ್ದೇ ಇನ್ನೊಂದು ಉದಾಹರಣೆಯೆಂದರೆ ಪ್ರೊಫೆಸರ್ ಎನ್. ಬಾಲಸುಬ್ರಹ್ಮಣ್ಯ. ಇವರೂ ಸಹ ಭೈರಪ್ಪನವರಿಗೆ ಪಾಠಹೇಳಿದ್ದವರು. ಮುಂದೆ ಅವರ ಆಪ್ತ ಸ್ನೇಹಿತರಾದರು. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅನುಭವಿಸಿದ ದುಃಸ್ಥಿತಿಯನ್ನು ಭೈರಪ್ಪನವರು ಹೀಗೆ ವರ್ಣಿಸಿದ್ದಾರೆ:
“ಮೈಸೂರು ವಿಶ್ವವಿದ್ಯಾಲಯದಲ್ಲಿ ಬಹುಮುಖ ವಿದ್ವತ್ತನ್ನು ಸಂಪಾದಿಸಿದವರಲ್ಲಿ ಬಾಲಸುಬ್ರಹ್ಮಣ್ಯರೇ ಕೊನೆಯವರು. ವಿದ್ವತ್ತನ್ನು ಪುರಸ್ಕರಿಸುವ ವಿಷಯದಲ್ಲಿ ಅವರು ವಿಶ್ವವಿದ್ಯಾಲಯದ ದುಷ್ಕಾಲದಲ್ಲಿ ನೌಕರಿಗೆ ಸೇರಿದರು. ‘ಹೆಚ್ಚಾಗಿ ತಿಳಕೋ ಅಂತ ನಾವೇನು ಹೇಳಿದ್ದೆವೆ? ನಿನ್ನ ತೀಟೆಗೆ ನೀನು ಓದಿಕೊಂಡೆ,’ ಎಂಬ ಮನೋಭಾವದ ಜೊತೆಗೆ ಜಾತಿಯೊಂದೇ ಸಾರ್ವಭೌಮ ಅರ್ಹತೆಯಾದ ಕಾಲ… ಅವರ ಪುಸ್ತಕಗಳ ಮರುಮುದ್ರಣದಂಥ ಕೇವಲ ವ್ಯಾವಹಾರಿಕ ವಿಷಯದಲ್ಲಿ ವಿಶ್ವವಿದ್ಯಾಲಯವು ಸಣ್ಣತನ ಬಿಟ್ಟು ನಡೆದುಕೊಳ್ಳಲಿಲ್ಲ.”
ಒಟ್ಟಾರೆ ಸಾರಾಂಶ ನಿಚ್ಚಳವಾಗಿದೆ. ಇಡೀ ಪ್ರಪಂಚದಲ್ಲಿ ಪಾಕಿಸ್ತಾನವನ್ನು ಬಿಟ್ಟು ಬಹುಶಃ ಭಾರತವೊಂದರಲ್ಲೇ ಜ್ಞಾನಾರ್ಜನೆ, ಅದಕ್ಕೆ ಪ್ರೋತ್ಸಾಹ, ಅದರ ಸಂರಕ್ಷಣೆಗಳನ್ನು ಜಿದ್ದುಹಿಡಿದು ವ್ಯವಸ್ಥಿತವಾಗಿ ಧ್ವಂಸ ಮಾಡಿದ ನಿದರ್ಶನ ಸಿಗುತ್ತದೆ. ಈ ಹತ್ಯಾಕಾಂಡ ನಡೆದದ್ದು ವಿಶ್ವವಿದ್ಯಾಲಯಗಳಲ್ಲಿ - ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ. ಪುನರುಕ್ತಿ ಎನಿಸಿದರೂ, ಮೈಸೂರು ವಿಶ್ವವಿದ್ಯಾನಿಲಯದ ಪತನದ ಕಥೆಯ ತದ್ರೂಪು ಭಾರತದ ಇಂಥ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಕಾಣುತ್ತೀವಿ.
ಈ ಲೇಖನವು ಮೈಸೂರು ಡೈರಿಯಿಂದ ಪ್ರಾರಂಭವಾಯಿತು. ಅದರಿಂದಲೇ ಸಮಾಪನಗೊಳಿಸುವುದು ಸೂಕ್ತ. ತಮ್ಮ ಮುನ್ನುಡಿಯಲ್ಲಿ ಹಾ.ಮಾ. ನಾಯಕರು ಈ ರೀತಿ ವ್ಯಥೆ ಪಡುತ್ತಾರೆ:
“ಮೈಸೂರು ವಿಶ್ವವಿದ್ಯಾನಿಲಯಕ್ಕೆ ಈಗ ಅಮೃತಮಹೋತ್ಸವ. ಅದರ ಚರಿತ್ರೆಯೊಂದು ಈಚೆಗೆ ಪ್ರಕಟವಾಯಿತೆಂದು ಕೇಳಿದೆ. ಆ ಚರಿತ್ರೆ ಇಸವಿಗಳ ಪಟ್ಟಿಯಾಗಿರುತ್ತೆಂಬುದರಲ್ಲಿ ನನಗೆ ಅನುಮಾನವಿಲ್ಲ. ಆ ಬಗೆಯ ಚರಿತ್ರೆಯಲ್ಲಿ ಆತ್ಮಸ್ಪರ್ಶವಿರುವುದಿಲ್ಲ. ಈ ಮೈಸೂರು ಡೈರಿ ಎಪ್ಪತ್ತೈದು ವರ್ಷಗಳಷ್ಟು ಹಳೆಯದಾದ ಈ ಮಹಾಸಂಸ್ಥೆಯ ಉಸಿರಾಟವನ್ನು ನಮಗೆ ಕೇಳಿಸುತ್ತದೆ.”
ನಲವತ್ತು ವರ್ಷಗಳ ಬಳಿಕ ಬಿ.ಜಿ.ಎಲ್. ಸ್ವಾಮಿ ನೋಡಿದ ಮಹಾರಾಜಾ ಕಾಲೇಜು ಅಕ್ಷರಶಃ ದನದ ದೊಡ್ಡಿಯಾಗಿತ್ತು, ಕತ್ತೆಗಳ ಕೊಂಪೆಯಾಗಿತ್ತು. ವಿದ್ಯೆಯನ್ನು ಬೋಧನೆ ಮಾಡುವ ಜಾಗದಲ್ಲಿ ಲದ್ದಿ - ಸಗಣಿ ತುಂಬಿತ್ತು. ಅಲ್ಲಿ ಈಗೇನಿದೆಯೋ ತೆಳಿದುಕೊಳ್ಳುವ ಧೈರ್ಯವಿಲ್ಲ ನನಗೆ.
ಸ್ವಾಮಿಯವರು ಹೇಳದೆ ಬಿಟ್ಟಿರುವ ಇತಿಹಾಸದ ಸತ್ಯವೊಂದಿದೆ. ಅವರ ಪೂಜ್ಯ ತಂದೆ, ಡಿ.ವಿ. ಗುಂಡಪ್ಪನವರೂ ಮೈಸೂರು ವಿಶ್ವವಿದ್ಯಾನಿಲಯದ ಏಳಿಗೆಗೆ ಶಕ್ತಿಮೀರಿ - ಶ್ರಮವರಿಯದೆ ದುಡಿದ ಮಹನೀಯರಲ್ಲಿ ಒಬ್ಬರಾಗಿದ್ದರು.
ಈ ಜ್ಞಾನಕಾಶಿಯ ಉದ್ಗಮನವು ಒಬ್ಬ ರಾಜರ್ಷಿ ಮತ್ತವರ ಪ್ರಬುದ್ಧ ದಿವಾನರ ಸತ್ಸಂಕಲ್ಪದ ಫಲ. ಅದರ ಪತನಕ್ಕೆ ಕಾರಣ ಮಂತ್ರಿಗಳು. ಆ ಪತನದ ಸೂಚಕವಾಗಿ ಅದರ ಧ್ಯೇಯವಾಕ್ಯವನ್ನು ನ ಹಿ ಅಜ್ಞಾನೇನ ಸದೃಶಂ ಎಂದು ಬದಲಿಸುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ.
।। ಸಾ ವಿದ್ಯಾ ಯಾ ವಿನಶ್ಯತಿ ।।
The Dharma Dispatch is now available on Telegram! For original and insightful narratives on Indian Culture and History, subscribe to us on Telegram.