ಪಥದರ್ಶಕ ಭೈರಪ್ಪನವರು

ಭೈರಪ್ಪನವರು ಕಾದಂಬರಿಕಾರರಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿ ದೊಡ್ಡವರು, ಪಥದರ್ಶಕರು. ವ್ಯಕ್ತಿಯಾಗಿ ಭೈರಪ್ಪನವರನ್ನು ಕಾಣುವ, ಮನಗಾಣುವ ಪ್ರಯತ್ನವೇ ಪ್ರಸ್ತುತ ಲೇಖನದ ಉದ್ದೇಶ.
ಭೈರಪ್ಪ
ಭೈರಪ್ಪ
Published on
4 min read
Summary

ಡಾ. ಎಸ್. ಎಲ್. ಭೈರಪ್ಪನವರು ಮಹಾನ್ ಕಾದಂಬರಿಕಾರರಷ್ಟೇ ಅಲ್ಲ, ನಿಷ್ಠೆ, ವೈಚಾರಿಕ ಪ್ರಾಮಾಣಿಕತೆ, ಸಮಾಜ ಕಾಳಜಿ, ಸರಳತೆಯನ್ನು ಮೈಗೂಡಿಸಿಕೊಂಡ ದೊಡ್ಡ ವ್ಯಕ್ತಿತ್ವ.

ಡಾ| ಎಸ್. ಎಲ್. ಭೈರಪ್ಪನವರು ನಮ್ಮ ನಾಡು ಕಂಡ ಶ್ರೇಷ್ಠ ಕಾದಂಬರಿಕಾರರು. ಅವರ ಕೃತಿಗಳನ್ನು ವಿಶ್ಲೇಷಿಸುವುದಕ್ಕಾಗಿ ಈ ಲೇಖನವು ಮೂಡಿಲ್ಲ. ಅವರ ಕೃತಿಗಳು ಸಾರ್ವಕಾಲಿಕ ಸಾರ್ವದೇಶಿಕವಾಗಿ ಬೆಳಗುವುದೆಂಬುದು ಸುವಿದಿತ. ಪರ್ವ, ಮಂದ್ರ, ತಂತು, ವಂಶವೃಕ್ಷ, ಸಾಕ್ಷಿ, ಆವರಣ, ಜಲಪಾತ, ನೆಲೆ –ಇಂತಹ ಹಲವು ಕೃತಿಗಳಲ್ಲಿ ಯಾವುದಾದರೂ ಒಂದನ್ನು ಅವರು ಬರೆದಿದ್ದರೂ ಅಂತಹ ಒಂದು ಮೇರುಕೃತಿಯೇ ಅವರನ್ನು ಸಾಹಿತ್ಯ ಪ್ರಪಂಚದಲ್ಲಿ ಧ್ರುವತಾರೆಯಾಗಿಸುತ್ತಿತ್ತು. ಇಂತಹ ಮಹಾಕೃತಿಗಳ ಮಹಾಪೂರವನ್ನೇ ಹರಿಸಿದ ಭೈರಪ್ಪನವರು ಸಾರಸ್ವತ ಲೋಕಕ್ಕೆ ಅಮರರು.

ಭೈರಪ್ಪನವರು ಕಾದಂಬರಿಕಾರರಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿ ದೊಡ್ಡವರು, ಪಥದರ್ಶಕರು. ವ್ಯಕ್ತಿಯಾಗಿ ಭೈರಪ್ಪನವರನ್ನು ಕಾಣುವ, ಮನಗಾಣುವ ಪ್ರಯತ್ನವೇ ಪ್ರಸ್ತುತ ಲೇಖನದ ಉದ್ದೇಶ. ಭೈರಪ್ಪನವರನ್ನು ನಾನು ಹಲವು ಬಾರಿ ಭೇಟಿ ಮಾಡಿದ್ದರೂ, ನಾನೇನು ಅವರ ಆಪ್ತನಲ್ಲ. ಆದರೆ ಅವರಲ್ಲಿ ಒಡನಾಡಿದ ಕೆಲವೇ ಕೆಲವು ದಿನಗಳ ಅನುಭವದ ಸಾಂದ್ರತೆ ಎಷ್ಟೆಂದರೆ, ನನಗವರು ಹಲವು ವರ್ಷಗಳಿಂದ ಪರಿಚಿತರೇನೊ ಎಂದೆನಿಸುವಷ್ಟು. ಭೈರಪ್ಪನವರನ್ನು ನೆನೆದಾಗ, ಅವರಲ್ಲಿ ಪ್ರಧಾನವಾಗಿ ಕೆಳಕಂಡ ಗುಣಗಳು ನನಗೆ ತೋರುತ್ತವೆ:

೧) ನಿಷ್ಠೆ ಮತ್ತು ವೈಚಾರಿಕ ಪ್ರಾಮಾಣಿಕತೆ 

೨) ಲೋಕಸಂಗ್ರಹ ಮತ್ತು ಸಮಾಜದ ಮೇಲಿನ ಕಾಳಜಿ

೩) ಸರಳತೆ ಮತ್ತು ವಿಶ್ವಾಸ

ಕಾದಂಬರಿಯಲ್ಲಿ ತನ್ಮಯತೆ

ಇಸವಿ ೨೦೧೨. ಭೈರಪ್ಪನವರ ಹಲವು ಕಾದಂಬರಿಗಳನ್ನು ಓದಿದ್ದ ನನಗೆ ಸಹಜವಾಗಿಯೇ ಅವರ ಬಗೆಗೆ ಗೌರವಾದರಗಳು ಮೂಡಿದ್ದವು. ಅವರನ್ನೊಮ್ಮೆ ಕಂಡು ಮಾತನಾಡಿಸಬೇಕೆಂಬ ಹಂಬಲವಿತ್ತು. ಒಮ್ಮೆ, ಶತಾವಧಾನಿ ಗಣೇಶರು ಭೈರಪ್ಪನವರನ್ನು ಭೇಟಿ ಮಾಡಲು ಹೋಗಿತ್ತಿರುವುದಾಗಿ ಹೇಳಿದರು. ನನ್ನನ್ನೂ ಕರೆದುಕೊಂಡು ಹೋಗುವಂತೆ ನಾನು ಅವರಲ್ಲಿ ವಿನಂತಿಸಿಕೊಂಡೆ. ಆಗವರು “ಕರೆದುಕೊಂಡು ಹೋಗಲು ನನಗೇನೂ ತೊಂದರೆಯಿಲ್ಲಪ್ಪ. ಆದರೆ ಭೈರಪ್ಪನವರನ್ನೊಮ್ಮೆ ಕೇಳಬೇಕು. ನಾನು ಹೋಗ್ತಿರೋದು ಅವರು ಬರೀತಿರೋ ಕಾದಂಬರಿಯ ಬಗ್ಗೆ ಮಾತನಾಡಕ್ಕೆ. ಈ ವಿಚಾರಾನ ಅವರು ಎಲ್ಲರಲ್ಲೂ ಚರ್ಚಿಸಕ್ಕೆ ಇಚ್ಛೆಪಡೋಲ್ಲ” ಎಂದರು. ಆನಂತರ, ಗಣೇಶರೇ ಕಾರಣ ಹೇಳಿ ನನ್ನನ್ನು ಕರೆದುಕೊಂಡು ಹೋದರು. ಆಗ ಭೈರಪ್ಪನವರು “ಯಾನ” ಕಾದಂಬರಿಯನ್ನು ಬರೆದು, ಅದರ ಹಸ್ತಪ್ರತಿಯನ್ನು ಗಣೇಶರಿಗೆ ಕೊಟ್ಟಿದ್ದರು.

ಸುಮಾರು ಹನ್ನೊಂದು ಘಂಟೆಗೆ ಭೈರಪ್ಪನವರ ಮನೆಗೆ ಹೋದೆವು. ಒಂದೆರಡು ನಿಮಿಷದಲ್ಲಿ ಕುಶಲೋಪರಿ ವಿಚಾರಿಸಿ, ತಮ್ಮ ಕಾದಂಬರಿಯ ಬಗೆಗೆ ಚರ್ಚಿಸಲು ಪ್ರಾರಂಭಿಸಿದರು. ಆಗ ನನಗೆ ಕಾದಂಬರಿಯ ವಸ್ತುವೂ ಗೊತ್ತಿರಲಿಲ್ಲ, ಅದರ ವೈಚಾರಿಕ ಹಿನ್ನಲೆಯೂ ತಿಳಿದಿರಲಿಲ್ಲ. ಮೂಕನಾಗಿ ಭೈರಪ್ಪನವರನ್ನೇ ನೋಡುತ್ತ ಕುಳಿತಿದ್ದೆ. ಗಣೇಶರು ನಾಸದೀಯ ಸೂಕ್ತದ ಬಗೆಗೆ, ಬ್ಲಾಕ್‍ಹೋಲ್ ಬಗೆಗೆ ಹೇಳುತ್ತಿದ್ದರು. ಒಬ್ಬ ಶಾಲಾವಿದ್ಯಾರ್ಥಿ ಗಮನವಿಟ್ಟು ಕುಳಿತಂತೆ ಭೈರಪ್ಪನವರು ಕೇಳುತ್ತಿದ್ದರು. ಗಣೇಶರು ಮಾತನಾಡುವಾಗ ಅವರನ್ನು ಎಲ್ಲಿಯೂ ತಡೆಯಲಿಲ್ಲ, ಪ್ರಶ್ನಿಸಲಿಲ್ಲ; ತಮ್ಮ ಅನಿಸಿಕೆಯನ್ನು ಹೇಳಲೂ ಇಲ್ಲ. ಅವರ ಮಾತನ್ನು ಕೇಳುತ್ತ ಆಗಾಗ ಪುಟಗಳಲ್ಲಿ ಗುರುತುಮಾಡಿಕೊಳ್ಳುತ್ತಿದ್ದರು.

ಗಣೇಶರ ಹತ್ತಿರ ಇದ್ದ ಪ್ರತಿ ಭೈರಪ್ಪನವರ ಬರಹದ ಪ್ರತಿಯ ನಕಲು. ಎಲ್ಲವೂ ಭೈರಪ್ಪನವರ ಕೈಬರಹದಲ್ಲಿಯೇ ಇತ್ತು. ಯಾವುದೂ ಟೈಪ್ ಆಗಿರಲಿಲ್ಲ. ಕಾದಂಬರಿ ಹಾಗಿರಲಿ, ಆ ಹಸ್ತಪ್ರತಿಯಲ್ಲಿಯ ಪುಟಗಳ ಸಂಖ್ಯೆಯನ್ನೂ ಭೈರಪ್ಪನವರೇ ಬರೆದಿದ್ದರು. ಯಾವುದಕ್ಕೂ ಯಾರೊಬ್ಬರ ಸಹಾಯವೂ ಇಲ್ಲ; ಇರಬಾರದೆಂಬ ನಿಯಮ. ಗಣೇಶರು ನಾಸದೀಯ ಸೂಕ್ತದ ವಿವರಗಳನ್ನು ಇವರಿಗಾಗಿ ಬರೆದು ತಂದಿದ್ದರು. ಭೈರಪ್ಪನವರು ಆ ಪುಟಗಳಿಗೆ ಒಂದು ಸಂಖ್ಯೆಯನ್ನು ಕೊಟ್ಟು, ಕಾದಂಬರಿಗೆ ಹೊಂದಿದ ಪುಟಗಳಿಗೆ ಪಿನ್ ಮಾಡಿ ಸೇರಿಸಿಕೊಂಡರು. ಹೀಗೆ ಮಾಡುತ್ತಲೇ, “ನಾನಿದನ್ನು ಇಲ್ಲಿ ಸೇರಿಸುವೆ”, “ಇದನ್ನು ಬೇರೆ ಅಧ್ಯಾಯವಾಗಿಯೇ ಮಾಡುವೆ” ಎಂದು ಹೇಳಿ, ಪ್ರತಿಯಲ್ಲಿ ಟಿಪ್ಪಣಿ ಬರೆದರು. ಅವರು ಹಸ್ತಪ್ರತಿಯನ್ನು ಜೋಡಿಸಿಕೊಳ್ಳುತ್ತಿದ್ದ ಶಿಸ್ತನ್ನು ಅಂದು ಕಂಡಂತಾಯಿತು.

Also Read
S.L. Bhyrappa: End of an Era
Also Read
Travelling with Tantu: Dr. S.L. Bhyrappa’s Contemporary Epic
Also Read
Walking with the Colossus: A Tribute to the Himalayan Spirit of Dr. S.L. Bhyrappa
Also Read
Dr. S.L. Bhyrappa Recounts a Dark Experience at an Indira Gandhi Rally

ಕಾದಂಬರಿಯ ವಿಚಾರ ಮಾತನಾಡುತ್ತಿದ್ದಾಗ ಅವರಿಗೆ ಯಾವುದೋ ಪತ್ರಕರ್ತರಿಂದ ದೂರವಾಣಿಯ ಕರೆ ಬಂದಿತು. ಆ ಪತ್ರಕರ್ತರು ಏನು ಕೇಳಿದರೋ ತಿಳಿಯದು, ಭೈರಪ್ಪನವರು ಸ್ವಲ್ಪ ಕೋಪದ ಧ್ವನಿಯಲ್ಲಿಯೇ “ನೋಡಿ, ಆ ರಾಜಕಾರಣಿಗಳಿಗೆ ಏನು ಸರಿ ಅನ್ನಿಸಿದಯೋ ಅದನ್ನ ಹೇಳಿದಾರೆ, ಅದು ಸರಿ ತಪ್ಪು ಅಂತ ಹೇಳೋದಕ್ಕೆ ನಾನ್ಯಾರು. ನನಗೆ ಸರಿಯೋ ತಪ್ಪೋ ಅನ್ನಿಸಿದರೂ ಅದನ್ನು ನಾನು ನಿಮಗ್ಯಾಕೆ ಹೇಳಬೇಕು… ಏನು? ಪ್ರತಿಕ್ರಿಯೆನಾ? ಆ ವಿಚಾರಕ್ಕೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು? ಅದೇನು ನನ್ನನ್ನು ಕುರಿತ ವಿಚಾರವಾ? ನನ್ನ ಕಾದಂಬರಿಯ ಬಗ್ಗೆ ಯಾರೋ ಏನೋ ಹೇಳಿದರೇ ತಲೆ ಕೆಡಸಿಕೊಳ್ಳಲ್ಲ, ಇದ್ಯಾವುದೋ ರಾಜಕಾರಣದ ವಿಚಾರ. ಇದಕ್ಕೂ ನನಗೂ ಸಂಬಂಧವಿಲ್ಲ. ದಯವಿಟ್ಟು ಇಂತಹ ವಿಚಾರಕ್ಕಾಗಿ ಫೋನ್ ಮಾಡಬೇಡಿ” ಎನ್ನುತ್ತ ಕರೆಯನ್ನು ಮುಕ್ತಾಯ ಮಾಡಿದರು.

ಪುನಃ ನಾವಿದ್ದ ಕಡೆಗೆ ಬಂದು ಕುಳಿತುಕೊಳ್ಳುತ್ತಲೇ ನಮ್ಮ ಮುಖ ನೋಡಿದರು. ನಾವು ಸುಮ್ಮನಿದ್ದರೂ, ನಮಗೆ ಆ ಕರೆಯ ಬಗೆಗೆ ಕುತೂಹಲವಿದ್ದಂತೆ ಅವರಿಗೆ ಅನ್ನಿಸಿರಬೇಕು. ಅವರೇ ನಮ್ಮನ್ನು ನೋಡಿ, “ಯಾವುದೋ ರಾಜಕಾರಣದ ವಿಚಾರ; ನನ್ನ ಪ್ರತಿಕ್ರಿಯೆ ಬೇಕಂತೆ. ನೋಡಿ, ಇದೆಲ್ಲ ಒಬ್ಬ ಸಾಹಿತಿಗೆ ಬೇಡದೆ ಇರೋ ಡಿಸ್ಟ್ರಾಕ್ಶನ್ಸ್. ನನ್ನ ಹೆಸರು ಪೇಪರ್ ಅಲ್ಲಿ ಬರುತ್ತೆ ಅಂತ ನಾನೇನೋ ಹೇಳಬೇಕು, ಅದಕ್ಕಿನ್ನ್ಯಾರೋ ಇನ್ನೇನೋ ಹೇಳ್ತಾರೆ. ನಾನು ಹೇಳಿದ್ದಕ್ಕೆ ಹೀಗೆ ಹೇಳಿದರಲ್ಲ ಅಂತ ನಾನು ಮತ್ತೇನೋ ಹೇಳಬೇಕು. ಇದಕ್ಕೆ ಕೊನೆ ಮೊದಲಿಲ್ಲ. ಅದು ನನ್ನ ಕೆಲಸವಲ್ಲ” ಎಂದು ನಿರ್ಣಾಯಕವಾಗಿ ನುಡಿದರು.

ತಮ್ಮ ಮುಂದಿದ್ದ ತಮ್ಮ ಹಸ್ತಪ್ರತಿಯನ್ನು ಕೈಗೆತ್ತಿಗೊಂಡು “ಇದು.... ಇದು ನನ್ನ ಕೆಲಸ. ನಾನು ಈ ಕೆಲಸಾನ ಶ್ರದ್ಧೆಯಿಂದ ಮಾಡಬೇಕು” ಎಂದರು. ಆ ಬಳಿಕ, ಯಾನದ ಬಗೆಗೆ ವಿಚಾರವು ಮುಂದುವರಿಯಿತು. ಗಣೇಶರೊಂದಿಗೆ ಎಲ್ಲವನ್ನೂ ಚರ್ಚಿಸಿದ ಮೇಲೆ, ದೃಷ್ಟಿ ನನ್ನತ್ತ ಹಾಯಿತು. ನನ್ನ ಕೆಲಸ, ನನ್ನ ಹವ್ಯಾಸ, ನನ್ನ ವ್ಯಾಸಂಗ, ಎಲ್ಲವನ್ನೂ ವಿಚಾರಿಸಿ, ನಮಗೆ ಉಪಚಾರ ಮಾಡಿ, ಬೀಳ್ಕೊಟ್ಟರು. ಅವರನ್ನು ಭೇಟಿಯಾದ ಸಂಪೂರ್ಣ ಕಾಲ ನಾನು ಹೆಚ್ಚು ಮಾತನಾಡದೆಯೇ ಸುಮ್ಮನೆ ಕುಳಿತಿದ್ದೆ. ಅವರು ಕೇಳಿದ್ದಕ್ಕೆ ಮಾತ್ರ ಉತ್ತರಕೊಟ್ಟಿದ್ದೆ. ಎಂದೂ ಸುಮ್ಮನಿರದ ನಾನು ಹೀಗೆ ಕೂಡುವುದು ಯಾರಿಗಾದರೂ ಆಶ್ಚರ್ಯವೇ.

ಗಣೇಶರು ಇದಕ್ಕೆ ಕಾರಣ ಕೇಳಿದರು. ಕಾರಣ ಆಗ ನನಗೂ ತಿಳಿದಿರಲಿಲ್ಲ, ಅವರಿಗಿನ್ನೇನು ಹೇಳಲಿ. ಹಲವರು ಹಿರಿಯರನ್ನು, ವಿದ್ವಾಂಸರನ್ನು ಮೊದಲ ಬಾರಿ ಕಂಡಾಗ ಹೀಗೆಯೇ ದೂರದಿಂದ ನೋಡಿ, ಮಾತನಾಡಿಸದೆಯೇ ಬಂದಿದ್ದೆ. ಪರ್ವತಾರೋಹಣಕ್ಕೆಂದೇ ಪ್ರವಾಸ ಮಾಡಿದರೂ, ಪರ್ವತವನ್ನು ಮೊದಲ ಬಾರಿಗೆ ನೋಡಿದಾಗ, ಅದರ ಎತ್ತರ, ವಿಶಾಲತೆ, ಗಾಢತೆಯನ್ನು ಕಂಡಾಗ, ಒಮ್ಮೆ ಉಸಿರು ಹಿಡಿದು ಕಣ್ಣಲ್ಲಿ ನೋಡಿದ್ದನ್ನು  ಮನಸ್ಸಿಗೆ ತಂದುಕೊಳ್ಳುತ್ತೇವೆ. ಆ ಬಳಿಕ ಅದನ್ನು ಹತ್ತುವುದುಂಟು. ಪ್ರಾಯಶಃ ದೊಡ್ಡವರನ್ನು ಕಂಡಾಗ ಇಂತಹದೇ ಅನುಭವವೆನ್ನಬಹುದು. ಅವರ ಮುಂದೆ ನಾನು ಏನು ಮಾತನಾಡಿದರೂ ಅದು ಬಾಲಿಶವೆನಿಸುತ್ತದೆ ಎಂಬ ಭಾವವೂ ನನ್ನಲ್ಲಿಯೇ ಮೂಡಿತ್ತು. ಭೈರಪ್ಪನವರು ತಮ್ಮ ಕಾದಂಬರಿಯಲ್ಲಿ ತಲ್ಲೀನರಾಗಿದ್ದನ್ನು ಕಂಡ ನನಗೆ ಮತ್ತೇನನ್ನು ಕೇಳಿದರೂ ಅದು ಅಪ್ರಸ್ತುತವೆನಿಸುತ್ತಿತ್ತು.

ಭೈರಪ್ಪನವರ ಕಾಳಜಿ

ಆ ಭೇಟಿಯ ಬಳಿಕ ಹಲವು ಬಾರಿ ಅವರನ್ನು ಸಂಪರ್ಕಿಸಿ ಮಾತನಾಡಿಸಿದ್ದುಂಟು. ಪ್ರೇಕ್ಷಾ ಪ್ರತಿಷ್ಠಾನಕ್ಕೆ ಭೈರಪ್ಪನವರು ಸಂಪಾದಕೀಯ ಮಾರ್ಗದರ್ಶಕರಾಗಿದ್ದರು. ಹೀಗಾಗಿ ನಾವು ಸಂಸ್ಥೆಯಿಂದ ಮುದ್ರಿಸುತ್ತಿದ್ದ ಹಲವು ಪುಸ್ತಕಗಳ ಬಗೆಗೆ, ನಮ್ಮಲ್ಲಿ ಅಚ್ಚಾದ ಲೇಖನಗಳ ಬಗೆಗೆ ಆಗಾಗ ವರದಿ ಒಪ್ಪಿಸುತ್ತಿದ್ದೆವು. ಅವರನ್ನೊಳಗೊಂಡ ಹಲವು ಕಾರ್ಯಕ್ರಮದಲ್ಲಿ (ಭೈರಪ್ಪನವರ ಸಾಹಿತ್ಯಾವಧಾನ, ಪರ್ವದ ಸಮ್ಮೇಳನ, ಯುವ ಬರಹಗಾರರ ಶಿಬಿರ, ಗೋಖಲೆ ಸಂಸ್ಥೆಯಲ್ಲಿನ ಹಲವು ಕಾರ್ಯಕ್ರಮಗಳು, ಇತ್ಯಾದಿ) ನಾನು ಭಾಗಿಯಾಗಿದ್ದರಿಂದ ಭೈರಪ್ಪನವರೊಡನೆ ಒಡನಾಟ ಬೆಳೆದಿತ್ತು.

ಡಾ| ಎಸ್. ಆರ್. ರಾಮಸ್ವಾಮಿಯವರ ಮಹಾಭಾರತ ಬೆಳದ ಬಗೆ ಎಂಬ ಗ್ರಂಥದ ಆಂಗ್ಲ ಅನುವಾದವನ್ನು ನಮ್ಮ ಸಂಸ್ಥೆಯಾದ ಪ್ರೇಕ್ಷಾ ಪ್ರತಿಷ್ಠಾನದದಿಂದ ಹೊರತರುತ್ತಿದ್ದೆವು. ಆ ಅನೂದಿತ ಗ್ರಂಥಕ್ಕೆ ಮುನ್ನುಡಿಯನ್ನು ಬರೆದುಕೊಡಲು ಭೈರಪ್ಪನವರನ್ನು ನಾವು ಕೇಳಿಕೊಂಡಿದ್ದೆವು. ಅದಕ್ಕಾಗಿ ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಲು ನನ್ನ ಗೆಳೆಯರಾದ ಅರ್ಜುನ, ಹರಿಯವರೊಡನೆ ಹೋಗಿದ್ದೆ.

ನಾವು ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಮಾಡಿ, ಭೈರಪ್ಪನವರ ಮನೆಯನ್ನು ಬೆಳಗ್ಗೆ ೧೦:೩೦ಕ್ಕೆ ತಲುಪಿದೆವು. ನಾವು ಅವರಿಗೆ ನಮಸ್ಕರಿಸುತ್ತಿದ್ದಂತೆಯೇ ನಾವು ಹೇಗೆ ಪ್ರಯಾಣ ಮಾಡಿದೆವು, ಎಷ್ಟು ಹೊತ್ತಿಗೆ ಬೆಂಗಳೂರಿನಿಂದ ರೈಲು ಹತ್ತಿದೆವು ಎಂಬುದನ್ನೆಲ್ಲ ವಿಚಾರಿಸಿದರು. ನಾವು ನಮ್ಮ ಸಂಸ್ಥೆಯ ಪುಸ್ತಕಗಳನ್ನು ನಮ್ಮ ಚೀಲದಿಂದ ತೆಗೆದು ಅವರಿಗೆ ನೀಡಿದೆವು. ನಾವು ನಮ್ಮ ಮಾತನ್ನು ಪ್ರಾರಂಭಿಸುವ ಮುನ್ನವೇ, “ಒಂದು ನಿಮಿಷ ತಾಳಿ” ಎನ್ನುತ್ತ ಒಳಕ್ಕೆ ಎದ್ದು ಹೋದರು. ಸ್ವಲ್ಪ ಹೊತ್ತಿನಲ್ಲಿ ಒಳಗಿನಿಂದ ಒಂದು ತಟ್ಟೆಯಲ್ಲಿ ಹೋಳಿಗೆಯನ್ನು ತಂದರು. “ಇದನ್ನು ನೀವ್ಯಾರಾದರು ಒಬ್ಬರು ತೊಗೊಳಿ, ಇನ್ನಿಬ್ಬರಿಗೆ ತರ್ತೀನಿ” ಎಂದು ಮೆಲ್ಲನೆ ಹೆಜ್ಜೆ ಹಾಕುತ್ತ ಅಡುಗೆಮನೆಯ ಕಡೆಗೆ ನಡೆದರು. ಅರ್ಜುನ ಅವರನ್ನು ಹಿಂಬಾಲಿಸಿ, “ಸರ್, ತಾವು ಕುಳಿತುಕೊಳ್ಳಿ, ನಾವೇ ಬಡಸಿಕೊಳ್ತೀವಿ” ಎಂದರೆ, ಬಿಡುವರೇ? ಅವರೇ ಬಿಸಿ ಹೋಳಿಗೆಯನ್ನು ತಟ್ಟೆಗೆ ಹಾಕಿ, ಅದಕ್ಕೆ ಯಥೇಷ್ಟವಾಗಿ ತುಪ್ಪ ಸುರಿದು ನಮಗೆ ಕೊಟ್ಟರು. ನಾವು ಒಂದು ತಿಂದು ಎದ್ದೆವು. “ನೀವೆಲ್ಲ ಬೆಳಗ್ಗೆ ಬೇಗನೆಯೇ ಮನೆಯಿಂದ ಹೊರಟಿರ್ತೀರಿ. ದಾರಿಯಲ್ಲಿ ಎನೂ ಚೆನ್ನಾಗಿ ಸಿಕ್ಕಿರ್ಲಿಕ್ಕಿಲ್ಲ. ಇನ್ನೊಂದು ಇನ್ನೊಂದು ತಿನ್ನಿ” ಎನ್ನುತ್ತ ಮತ್ತೊಂದನ್ನು ಬಡಿಸಿದರು. ನಾವು ತಿಂದ ತಟ್ಟೆಯನ್ನೂ ಅವರೇ ತೆಗೆದುಕೊಂಡು ಹೋಗಲು ಮುಂದಾದರು. ನಮಗೆ ಹೀಗೆ ಮುಜುಗರ ಮಾಡಬೇಡಿ ಎಂದು ಬೇಡಿಕೊಳ್ಳಬೇಕಾಯಿತು. ನಮಗೆ ಎಲ್ಲ ಉಪಚಾರಗಳು ನಡೆದ ಮೇಲೆ, “ಈಗ ಹೇಳಿ, ಏನು ವಿಚಾರ?” ಎನ್ನುತ್ತ ವಿಷಯಕ್ಕೆ ಬಂದರು.

(ಸಶೇಷ )

The Dharma Dispatch is now available on Telegram! For original and insightful narratives on Indian Culture and History, subscribe to us on Telegram.

logo
The Dharma Dispatch
www.dharmadispatch.in