ಭೈರಪ್ಪನವರ ಪರ್ವ ರಚನೆಯ ಹಿನ್ನೆಲೆಯಲ್ಲಿ ಸ್ಥಳೀಯ ಅನುಭವ, ವ್ಯಾಪಕ ವ್ಯಾಸಂಗ, ಭಾರತೀಯ ಎಪಿಕ್‌ಗಳ ಅನಿವಾರ್ಯತೆ ಮತ್ತು ನಿಷ್ಠೆಯ ಮೌಲ್ಯಗಳನ್ನು ಈ ಲೇಖನದಲ್ಲಿ ಗಾಢವಾಗಿ ಚರ್ಚಿಸಲಾಗಿದೆ. ಅಂತೆಯೇ, ಪಿ.ವಿ. ಕಾಣೆಯವರ ಧರ್ಮಶಾಸ್ತ್ರದ ಇತಿಹಾಸದ ಬಗೆಗೆ ಅಪಾರ ಗೌರವ ವ್ಯಕ್ತಪಡಿಸಿದ ವಿವರಗಳೂ ಇವೆ.
ರಾಮಸ್ವಾಮಿಯವರ ಕನ್ನಡ ಪುಸ್ತಕವನ್ನು ಭೈರಪ್ಪನವರು ಓದಿದಂತಿತ್ತು; ಅಥವಾ ಅದರಲ್ಲಿಯ ವಿಚಾರವಂತೂ ಅವರಿಗೆ ತಿಳಿದೇ ಇತ್ತು. ನಾವು ಪುಸ್ತಕದ ವಿಚಾರ ಹೇಳಿದ ಬಳಿಕ ನಮ್ಮ ಸಂಭಾಷಣೆಯು ಭೈರಪ್ಪನವರ ಪರ್ವ ಕಾದಂಬರಿಯತ್ತ ತಿರುಗಿತು.
ಅವರು ನಮಗೆ ಅಂದು ಹೇಳಿದ ಹಲವು ವಿಚಾರಗಳನ್ನು “ಪರ್ವ ಬರೆದದ್ದು” ಎಂಬ ಲೇಖನದಲ್ಲಿ ಬರೆದಿದ್ದಾರೆ. ಅವನ್ನು ಮತ್ತೆ ನಾನಿಲ್ಲಿ ಪುನರಾವರ್ತಿಸುವುದಿಲ್ಲ. ಭೈರಪ್ಪನವರು “ನಾನು ಇಂತಹ ಲೇಖನದಲ್ಲಿ ಇದನ್ನೆಲ್ಲವು ಬರೆದಿದ್ದೇನೆ, ನೀವು ಓದಿಕೊಳ್ಳಿರಿ” ಎಂದು ಒಮ್ಮೆಯೂ ಹೇಳಲಿಲ್ಲ; ಆ ಲೇಖನದ ಪ್ರಸ್ತಾವವನ್ನೂ ಮಾಡಲಿಲ್ಲ. ಮೊದಲ ಬಾರಿಗೆ ಹೇಳುವಂತೆ ಹೇಳತೊಡಗಿದರು. ಅದನ್ನು ಅವರಿಂದಲೇ ಕೇಳುವ ಸೊಗಸೇ ಸೊಗಸು. ನಾವೂ ಆ ಲೇಖನವನ್ನು ಮುಂಚೆಯೇ ಓದಿದ್ದೆವೆಂದು ಹೇಳಲಿಲ್ಲ. ಅದರಿಂದಾಗಿ ನಮಗೆ ಲಭಿಸಿದ್ದೇನೆಂದರೆ, ಆ ಲೇಖನಕ್ಕೆ ಹೊರತಾದ ಮತ್ತೂ ಕೆಲವು ವಿಚಾರಗಳು!
ಪರ್ವದ ತಯಾರಿಗಾಗಿ ಭೈರಪ್ಪನವರ ಪ್ರವಾಸವು ಒಂದೆಡೆಯಾದರೆ, ವ್ಯಾಸಂಗ ಇನ್ನೊಂದೆಡೆ. ನಮಗೆ ತಿಳಿದಂತೆ ವಿ.ಎಸ್. ಸುಕಥನಕರ್ ಮತ್ತು ಅವರ ವಿದ್ವನ್ಮಿತ್ರರಿಂದ, ಭಂಡಾರ್ಕರ್ ಸಂಶೋಧನಾ ಕೇಂದ್ರದ ಮೂಲಕ ಪ್ರಕಟವಾದ ಮಹಾಭಾರತದ ಗ್ರಂಥವು ಮೂಲ ಮಹಾಭಾರತದ ಗ್ರಂಥಕ್ಕೆ ಹೆಚ್ಚು ಪ್ರಾಮಾಣಿಕವಾಗಿರಬಹುದು. ಅದನ್ನೇ ಭೈರಪ್ಪನವರು ಹೆಚ್ಚು ನೆಚ್ಚಿದ್ದರೆಂದು ಭಾವಿಸಿದ್ದೆವು. ಆದರೆ, ಭೈರಪ್ಪನವರು ನಮಗಂದು ಹೇಳಿದ್ದು ಹೀಗಿತ್ತು: “ನನಗೆ ವ್ಯಾಸಭಾರತದ ಮೂಲ ಓದೋಕ್ಕಿಂತ ಸಾಮಾಜಿಕ ದೃಷ್ಟಿಕೋನವನ್ನ ಬಿಂಬಿಸುವ ಮಹಾಭಾರತ ಬೇಕಿತ್ತು. ಸುಕಥನಕರ್‌ರವರ ಮಹಾಭಾರತವಂತೂ ಸರಿಯೇ, ಆದರೆ ನನಗೆ ಅದಕ್ಕಿಂತ ಗೋರಖಪುರ್ ಮಹಾಭಾರತ, ಮತ್ತೂ ಕೆಲವು ಪ್ರಾದೇಶಿಕ ಮಹಾಭಾರತಗಳು ಒದಗಿಬಂದವು. ನನಗೆ ಮೂಲ ಕತೆಗಿಂತ ಅಲ್ಲಿಯ ಪಾತ್ರಗಳಿಗೆ ನ್ಯಾಯ ಒದಗಿಸುವ ಕತೆಗಳು, ಸಂಭಾಷಣೆಗಳು ಬೇಕಿದ್ದವು. ಅದೆಲ್ಲ ಓದಿ ಗುರುತುಮಾಡಿಕೊಂಡೆ. ನಾನು ಪ್ರವಾಸ ಮಾಡುವಾಗ, ಮಹಾಭಾರತದಲ್ಲಿ ಬರೆದದ್ದು ನನ್ನ ಎದುರಿಗೆ ಕಾಣಬೇಕಿತ್ತು.”
ಆಗಿನ ದಿನದಿಂದ ಎರಡು ಮೂರು ವರ್ಷಗಳ ಮುನ್ನವೇ ನಾನು ನಾಲಂದಾ, ರಾಜಗಿರ್ (ಮೂಲತಃ ರಾಜಗೃಹ), ಕಾಶಿ, ಮಥುರಾ, ಮುಂತಾದ ಜಾಗಗಳನ್ನು ನೋಡಿಬಂದಿದ್ದೆ. ರಾಜಗೃಹದ ಬಳಿ ಇರುವ ‘ಜರಾಸಂದ ಕೀ ಅಖಾರಾ’ ಎಂಬ ಜಾಗವು ಈಗಲೂ ಪ್ರಸಿದ್ಧ. ಭೀಮನು ಜರಾಸಂಧನನ್ನು ಅಲ್ಲಿಯೇ ಕೊಂದನೆಂಬ ಕತೆಯಿದೆ. ನಾನು ಅದನ್ನು ನೋಡಿರುವುದಾಗಿ ಹೇಳಿ, ಅಲ್ಲಿಯೇ ಕಂಡ ‘ವೈಭವ’ವೆಂಬ ಬೆಟ್ಟದ ಬಗೆಗೆ ಅವರಿಗೆ ಹೇಳಿ, ನಾನು ಅಲ್ಲಿಗೆ ಹೋದಾಗ ನೀವು ಪರ್ವದಲ್ಲಿ ಬರೆದದ್ದನ್ನು ಕಂಡಂತಾಯಿತು ಎಂದು ಹೇಳಿದೆ. “ಹೌದು, ಹೌದು, ನಾನು ಅಲ್ಲಿ ನೋಡಿದ್ದನ್ನೇ ಬರೆದೆ. ನೀವು ಅಲ್ಲಿ ಎಷ್ಟು ದಿನ ಇದ್ದರಿ?” ಎಂದು ಕೇಳಿದರು. ನಾನಿದ್ದದ್ದು ಒಂದು ದಿನ. ಅವರೋ, ಅಲ್ಲಿ ಒಂದು ವಾರಕ್ಕಿಂತ ಹೆಚ್ಚು ದಿನವಿದ್ದರಂತೆ. ಆ ಜಾಗದ ಹತ್ತಿರದ ಕೆಲವು ದೇವಾಲಯಗಳನ್ನು ಹೆಸರಿಸಿದರು. ನಾನವನ್ನು ನೋಡಿರಲಿಲ್ಲ.
ಭೈರಪ್ಪನವರು ರಾಜಗೃಹದ ಬಳಿ ಓಡಾಡಿದಂತೆಯೇ ರಾಜಸ್ಥಾನದಲ್ಲಿಯೂ ಓಡಾದಿದ್ದರಂತೆ. ಅಲ್ಲಿಯೂ ಭೀಮನ ದೇವಾಲಯಗಳನ್ನು ನೋಡಿ ಬಂದಿದ್ದರು. ಭೀಮನು ಕೀಚಕನನ್ನು ವಧಿಸಿದ್ದು ಅಲ್ಲಿಯೇ ಎಂದು ಅಲ್ಲಿಯ ಜನರು ಇಂದಿಗೂ ನಂಬುತ್ತಾರೆ. ಆ ದೇವಾಲಯಗಳಿಗೆ ಯಾವ ಪ್ರಸಿದ್ಧಿಯೂ ಇಲ್ಲ; ಪ್ರವಾಸಿಗರಿಗಂತೂ ತಿಳಿಯದು. ಭೈರಪ್ಪನವರು ಆ ಜಾಗದ ಒಬ್ಬ ಉಪಾಧ್ಯಾಯರನ್ನು ಭೇಟಿ ಮಾಡಿ, ಅವರೊಟ್ಟಿಗೆ ಕುದುರೆಯಲ್ಲಿ ಸವಾರಿ ಮಾಡಿ, ಅಲ್ಲಿಯ ಪ್ರದೇಶದವರೇ ಆದ ಜನರೊಡನೆ ಓಡಾಡಿ, ಅಲ್ಲಿಯ ಭೀಮನ ದೇವಾಲಯ, ಅಲ್ಲಿ ನಡೆಯುತ್ತಿದ್ದ ಪೂಜಾವಿಧಾನ, ಆ ಪೂಜಾವಿಧಾನಕ್ಕಿದ್ದ ತತ್ತ್ವ, ಇವನ್ನೆಲ್ಲ ಕೇಳಿ, ತಿಳಿದುಕೊಂಡಿದ್ದರು. ಇವನ್ನೆಲ್ಲ ಸವಿಸ್ತಾರವಾಗಿ ಹೇಳಿದರು. “ಅಲ್ಲಿಯ ಜನರಿಗೆ ಭೀಮನನ್ನು ನಂಬದ್ರೆ ಆತ ನಮ್ಮನ್ನು ಕಾಪಾಡ್ತಾನೆ ಅನ್ನೋ ನಂಬಿಕೆ. ಯಾರಾದ್ರೂ ತನ್ನ ಹೆಂಡತಿಯ ಮೇಲೆ ಕಣ್ಣು ಹಾಕಿದರೆ, ಅವರನ್ನು ಹೊಡೆದುರುಳಿಸೋ ಶಕ್ತಿ ಭೀಮ ಕೊಡ್ತಾನೆ ಅನ್ನೋದು ಅವರ ಗಾಢವಾದ ನಂಬಿಕೆ. ಆ ಪೂಜೆಗಳನ್ನು, ಅದಕ್ಕಾಗಿ ಬಂದಿದ್ದ ಹೊಸ ವಧು-ವರರನ್ನೂ ನಾನು ನೋಡಿ, ಮಾತನಾಡಿಸ್ದೆ. ನನ್ನ ಜೊತೆ ಇದ್ರಲ್ಲ ಒಬ್ಬ ಮೇಷ್ಟ್ರು, ಅವರು ಆ ಯುವಕನಿಗೆ ಹೇಳದ್ರು – ಏ ಸಾಬ್ ಜೋ ಪೂಚ್ ರಹೇ ಹೈ, ಇಸ್ಕೊ ಜವಾಬ್ ದೋ ಅಂತ. ಆಗ ಆತ ಅಲ್ಲಿಯ ವಾಡಿಕೆ, ಪೂಜೆ ಬಗ್ಗೆ ಎಲ್ಲ ಹೇಳಿದ” ಎಂದರು.
ರಾಜಗೃಹದ ಬಳಿಯಿರುವ ಜರಾಸಂದ ಕೀ ಅಖಾರಾಗೆ ಆಗಾಗ್ಗೆ ಬರುತ್ತಿದ್ದ ಕೆಲವು ಜಟ್ಟಿಗಳನ್ನೂ ಮಾತನಾಡಿಸಿದ್ದರಂತೆ. ಅವರೆಲ್ಲರೂ ಅಲ್ಲಿಯ ಮರಳನ್ನು ತೆಗೆದುಕೊಂಡು ಹೋಗಿ ಅವರ ಅಖಾರಾದಲ್ಲಿ ತಮ್ಮ ಮಣ್ಣಿನ ಜೊತೆ ಸೇರಿಸಿ, ಆ ಮಣ್ಣಿನಲ್ಲಿ ಭೀಮನ ಬಗೆಗಿನ ತಮ್ಮ ಭಕ್ತಿಯನ್ನು ಅನುಭವಿಸುತ್ತಾರೆ.
“ನೋಡಿ, ನಾನು ಹೇಳ್ತೀನಿ, ನಮ್ಮ ಜನಕ್ಕೆ ರಾಮಾಯಣ ಮಹಾಭಾರತಗಳನ್ನು ಬಿಟ್ಟು ಬದುಕೋದು ಕಷ್ಟ. ಇವೆರಡೂ ಭಾರತೀಯ ಜೀವನದಲ್ಲಿ ಹೊಸೆದುಕೊಂಡು ಹೋಗಿವೆ” ಎನ್ನುತ್ತ ತಮ್ಮ ಎರಡು ಕೈಯ ಬೆರಳುಗಳನ್ನು ಒಟ್ಟಿಗೆ ಸೇರಿಸಿದರು. “ರಾಮಾಯಣ – ಮಹಾಭಾರತ ಬಿಟ್ಟರೆ, ಭಾರತೀಯತೆಯನ್ನೇ ಬಿಡಬೇಕು. ಸಾಹಿತಿ – ಲೇಖಕರು – ಇವರಿಗಾದರೂ ಇನ್ನೇನು? ಯಾವ ಸಾಹಿತಿ ಭಾರತೀಯತೆಗೆ ಪ್ರಾಮಾಣಿಕವಾಗಿ ಮನಸ್ಸು ಕೊಟ್ಟಿರ್ತಾನೋ, ಆತನಿಗೆ ರಾಮಾಯಣ ಮಹಾಭಾರತಗಳನ್ನು ಮುಟ್ಟದೆ ಇರೋದು ಕಷ್ಟ. ಇವೆರಡನ್ನು ಕೈಗೆತ್ತಿಗೊಂಡರೆ, ಅವುಗಳ ಅಗಾಧತೆ, ವೈಶಾಲ್ಯತೆ ಬೆಚ್ಚುಬೀಳ್ಸುತ್ತೆ. ನನ್ನಿಂದ ವ್ಯಾಸ ವಾಲ್ಮೀಕಿನ ಮುಟ್ಟಕ್ಕಾಗಲ್ಲ ಅಂತ ಕೆಳಗಿಟ್ಟು ಬಿಡ್ತೀವಿ. ಆದರೆ, ಇವೆರಡರ ಬಗ್ಗೆ ಏನಾದರೂ ಬರೀದೆ ಇದ್ದರೆ, ಆತನಿಗೆ ಅಪೂರ್ಣತೆ ಕಾಡುತ್ತೆ. ಈಗ ನೋಡಿ, ರಾಮಸ್ವಾಮಿಯವರು ಈ ಪುಸ್ತಕ ಬರೆದ ಕಾರಣ ಇದೇ ಅಲ್ಲವಾ? ಅವರು ವಿದ್ವಾಂಸರು, ಆದ್ದರಿಂದ ಇದರ ಬಗ್ಗೆ ಸಂಶೋಧನ ಲೇಖನ ಬರೆದಿದಾರೆ. ಯಾರು ಕವಿಗಳೋ, ಅವರು ಕಾವ್ಯ ಬರೀತಾರೆ. ಇನ್ನು ನನ್ನಂತಹ ಕಾದಂಬರಿಕಾರರು ಪರ್ವದಂತೆ ಏನಾದರೂ ಕಾದಂಬರಿ ಬರೀಬೇಕು. We cannot abstain from the epics if we are true Indians,” ಎಂದು ಹೇಳಿದರು.
ನಾನು ದ್ವಾರಕೆಗೆ ಹೋಗಿದ್ದಾಗ ಅಲ್ಲಿಯ ಸಮುದ್ರ ತೀರದಲ್ಲಿ ಓಡಾಡಿ ಬಂದಿದ್ದೆ. ಅದನ್ನು ಭೈರಪ್ಪನವರಿಗೆ ಹೇಳಿ, “ನೀವು ಅದ್ಯಾವುದೋ ಲೈಟ್ ಹೌಸ್‌ನಲ್ಲಿ ಇದ್ದು ಸಮುದ್ರ ನೋಡಿ ಬಂದಿದ್ದನ್ನು ನಿಮ್ಮ ಲೇಖನದಲ್ಲಿ ಬರೆದಿದ್ದಿರಿ. ನಾನೂ ಅಲ್ಲಿ ಓಡಾಡಿದೆ. ಆದರೆ ನಾನು ಹೋಗಿದ್ದು ಇತ್ತೀಚೆಗೆ. ಅಲ್ಲಿ ಇದ್ದದ್ದು ಒಂದೇ ಲೈಟ್ ಹೌಸ್, ಅದು ಬೀಗ ಹಾಕಿತ್ತು. ನೀವು ಅಲ್ಲಿಗೇ ಹೋಗಿದ್ದಾ? ಅಲ್ಲಿ ಯಾರಾದರೂ ನಿಮ್ಮನ್ನ ಕರೆದುಕೊಂಡು ಹೋಗಿದ್ದರಾ ಸಾರ್?” ಎಂದು ವಿಚಾರಿಸಿದೆ. ಅದಕ್ಕವರು ನಕ್ಕು “ಎಲ್ಲ ಕಡೆಗೂ ನನ್ನನ್ಯಾರು ಕರಕೊಂಡು ಹೋಗ್ತಾರೆ! ನಾನು ಹೋದಾಗಲೂ ಬೀಗಾ ಹಾಕಿತ್ತು. ದಿನಾ ಹೋಗ್ತಾ ಇದ್ದೆ. ಒಮ್ಮೆ ಯಾರೋ ಒಬ್ಬ ಅಲ್ಲಿ ಕೆಲಸ ಮಾಡೋನು ಒಳಗಡೆ ಇದ್ದದ್ದನ್ನು ನೋಡಿ, ನಾನು ಒಳಕ್ಕೆ ಹೋದೆ. ಆತ ನನ್ನ ಮಾತೂ ಕೇಳದೇ, ನನ್ನನ್ನ ಬೈದು ಅಲ್ಲಿಂದ ಹೊರಕ್ಕೆ ಅಟ್ಟಿದ. ಆತ ಊಟಕ್ಕಾಗಿ ಹೊರಗಡೆ ಹೋಗುವಾಗ, ಅವನಿಗೆ ಗೊತ್ತಿಲ್ಲದಂತೆ ಒಳಕ್ಕೆ ನುಗ್ಗಿ, ಮೇಲಕ್ಕೆ ಹತ್ತಿದೆ. ಆತ ಹೊರಗಿನಿಂದ ಬೀಗ ಹಾಕಿಕೊಂಡು ಹೋದ. ಆತ ಬರುವವರೆಗೂ ನಾನು ಮೇಲೆಯೇ ಇದ್ದೆ. ಮಧ್ಯಾಹ್ನದ ವೇಳೆ; ಅಲ್ಲಿ ತುಂಬಾ ಸೆಖೆ, ಒಳ್ಳೆ ಸಮುದ್ರದ ಗಾಳಿ. ಸಮುದ್ರವನ್ನ ನೋಡುತ್ತಾ ಹಾಗೆಯೇ ನಿದ್ದೆ ಬಂತು. ಅಲ್ಲೇ ಮಲಗಿದೆ. ಒಂದು ಘಂಟೆ ನಿದ್ದೆ ಮಾಡಿ ಎದ್ದು, ಸಮುದ್ರವನ್ನೇ ನೋಡುತ್ತ ಕೃಷ್ಣನ ಬಗ್ಗೆ, ದ್ವಾರಿಕೆಯ ಬಗ್ಗೆ ಯೋಚಿಸುತ್ತಿದ್ದೆ. ಅದನ್ನೇ ನಾನು ಸಾತ್ಯಕಿಯ ಸ್ವಗತದಂತೆ ಪರ್ವದಲ್ಲಿ ಚಿತ್ರಿಸಿರೋದು.” ಎಂದು ಹೇಳಿ, “ಸಾತ್ಯಕಿಯೂ ಪರ್ವದಲ್ಲಿ ನಿದ್ದೆ ಮಡೋದು ಬರುತ್ತೆ ನೋಡಿ” ಎಂದು ನಕ್ಕರು. “ಓಹ್, ಹಾಗಾದರೆ, ನೀವು ಅಂದೇ ಆ ಭಾಗವನ್ನು ಬರೆದರಾ ಸಾರ್?” ಎಂದು ಕೇಳಿದ್ದಕ್ಕೆ, “ಇಲ್ಲ, ಅನುಭವವಾದ ತತ್ಕ್ಷಣ ಅದನ್ನ ಬರೀಬಾರದು; ನಾನದನ್ನು ಆಗೇನು ಬರೆದೂ ಇಲ್ಲ. ಬರಿಯುವಾಗ, ಪಾತ್ರಕ್ಕೆ ಒದಗಿಬರೋ ಸನ್ನಿವೇಶಗಳಿಗೆ ಅನುಭವವನ್ನು ಹೊಂದಿಸಬೇಕು. ನಮ್ಮ ಅನುಭವವನ್ನ ವಿಶ್ಲೇಷಣೆ ಮಾಡದೆ, ಹಾಗೆಯೇ ಬರದ್ರೆ ಅದು ರಸದ ಮಟ್ಟಿಗೆ ಏರೋಲ್ಲ. ಅದು ಬಯೋಗ್ರಾಫಿಕಲ್ ಆಗುತ್ತೆ” ಎಂದರು. ಇದು ಭೈರಪ್ಪನವರ ವಿಶಿಷ್ಟ ದೃಷ್ಟಿ.
ನಮ್ಮ ಮಾತು ಪರ್ವದಿಂದ ಧರ್ಮಶಾಸ್ತ್ರದ ಕಡೆಗೆ ತಿರುಗಿತು. ನಾವು ಮೂವರೂ ಮಹಾಮಹೋಪಾಧ್ಯಾಯ ಭಾರತರತ್ನ ಡಾ| ಪಾಂಡುರಂಗ ವಾಮನ ಕಾಣೆಯವರ ಧರ್ಮಶಾಸ್ತ್ರದ ಇತಿಹಾಸವನ್ನು ರಾ. ಗಣೇಶರ ಮಾರ್ಗದರ್ಶನದಲ್ಲಿ ಮತ್ತೂ ಕೆಲವು ಸ್ನೇಹಿತರೋಡನೆ ಓದಿದ್ದೆವು. ಅಲ್ಲದೆ, ನಾನು ಮತ್ತು ಹರಿ ರವಿಕುಮಾರ್, ಪಿ.ವಿ. ಕಾಣೆಯವರ ಮೊಮ್ಮಗ ಡಾ| ಶಾಂತಾರಾಮ್ ಕಾಣೆಯವರನ್ನು ಪುಣೆಯಲ್ಲಿ ಭೇಟಿ ಮಾಡಿ, ಕಾಣೆಯವರ ಜೀವನದ ಬಗೆಗೆ, ಅವರ ವ್ಯಾಸಂಗದ ಬಗೆಗೆ ಮಾಹಿತಿಯನ್ನು ಪಡೆದಿದ್ದೆವು. ಅದನ್ನು ಭೈರಪ್ಪನವರಿಗೆ ಹೇಳತೊಡಗಿದೆ. ಧರ್ಮಶಾಸ್ತ್ರದ ಹಸ್ತಪ್ರತಿಯ ಫೋಟೋಗಳನ್ನು ತೋರಿಸಿದೆ.
ಭೈರಪ್ಪನವರಿಗೆ ಕಾಣೆಯವರ ಮೇಲೆ ಅಪಾರವಾದ ಗೌರವ, ಪ್ರೀತಿ. ಸಹಜವಾಗಿಯೇ ನಾನು ಹೇಳಿದ್ದ ವಿಷಯಗಳಲ್ಲಿ ಅವರಿಗೆ ಆಸಕ್ತಿ ತೋರಿದ್ದಿರಬಹುದು. ನಾನು ಹೇಳುವ ಮಾತುಗಳನ್ನು ತದೇಕಚಿತ್ತದಿಂದ ಕೇಳಿದರು. ಕೇಳಿದ ಮೇಲೆ, ಕಾಣೆಯವರಲ್ಲಿ ಅವರಿಗಿದ್ದ ಗೌರವವನ್ನು ತಿಳಿಸಿದರು. ಭೈರಪ್ಪನವರಿಗೆ ಬಹಳ ಇಷ್ಟವಾದ ಗುಣವೆಂದರೆ ಪ್ರಾಯಶಃ “ನಿಷ್ಠೆ”. ಅವರ ಮಾತು ಬರಹಗಳಲ್ಲಿ ಹಲವು ಬಾರಿ ‘ನಿಷ್ಠೆ’ಯ ಮಹತ್ತ್ವ ಸಾರಿರುವುದನ್ನು ಕಾಣಬಹುದು.
ಪಿ.ವಿ. ಕಾಣೆಯವರು ಮೂರು – ನಾಲ್ಕು ದಶಕಗಳುದ್ದಕ್ಕೂ ತಪಸ್ಸೆಂಬಂತೆ ಧರ್ಮಶಾಸ್ತ್ರದ ಅಧ್ಯಯನ ಮಾಡಿ, ಧರ್ಮಶಾಸ್ತ್ರದ ಇತಿಹಾಸವನ್ನು ಬರೆದರು. ಸುಮಾರು ಮೂರು ಸಂಪುಟಗಳು ಮುದ್ರಿತವಾದ ಬಳಿಕ, ಕಾಣೆಯವರಿಗೆ ಕಣ್ಣಿನಲ್ಲಿ ಸಮಸ್ಯೆಯಾಗಿ ಅವರು ಕಣ್ಣುಗಳನ್ನು ಕಳೆದುಕೊಳ್ಳುವ ಸಂಭಾವನೆ ಇತ್ತು. ಅವರ ನಾಲ್ಕನೆಯ ಸಂಪುಟದಲ್ಲಿ ಅವರು ಹೀಗೆ ನಿವೇದಿಸುತ್ತಾರೆ: “ನಾನು ದೇವರಲ್ಲಿ ಈವರೆಗೂ ಏನನ್ನೂ ಬೇಡಿಲ್ಲ. ಆದರೆ ಈಗ ಬೇಡುವ ಪ್ರಸಂಗ ಒದಗಿದೆ. ನಾನು ಕೈ ಹಿಡಿದಿರುವ ಕೆಲಸ ಮುಗಿಸುವವರೆಗೂ ನನಗೆ ದೃಷ್ಟಿಯನ್ನು ಕೊಡು. ಈ ಕೆಲಸವಾದ ಮೇಲೆ, ದೃಷ್ಟಿ ಹೋದರೆ ಹೋಗಲಿ”. ಈ ವಾಕ್ಯವನ್ನು ನೆನೆಯುತ್ತ ಭೈರಪ್ಪನವರು “ಇದು – ಇದು ಕೆಲಸದ ಬಗ್ಗೆ ನಿಷ್ಠೆ ಅಂದರೆ. ಇದು ಇರಬೇಕು. ಕಾಣೆಗೆ ತಮಗೆ ದೃಷ್ಟಿ ಬೇಕು ಅನ್ನಿಸ್ಸಿದ್ದು ಈ ಕೆಲಸಕ್ಕೆ ಮಾತ್ರ ಅಂತ ಬರೀತಾರಲ್ಲ – ಅದು ದೊಡ್ಡದು. ಈ ರೀತಿ ಹಿಡಿದ ಕೆಲಸ ಬಿಡೋವರಗುವೆನೆಯಾ ತಪಸ್ಸು ಮಾಡಿದ ಹಾಗೆ ಮಾಡ್ತಿದ್ದ್ರಲ್ಲ – ಆ ನಿಷ್ಠೆ ನಮಗೆ ಬರಬೇಕು. ಇಂಥವರು ನಮಗೆ ಮಾದರಿಯಾಗಬೇಕು.”
ಮುಂದುವರಿದು, ಭೈರಪ್ಪನವರು ತಾವು ಮಾಡಿದ್ದ ಧರ್ಮಶಾಸ್ತ್ರದ ಅಧ್ಯಯನದ ಬಗೆಗೆ ಹೇಳತೊಡಗಿದರು. ಅವರು ವಂಶವೃಕ್ಷ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಯಾರೋ ಒಬ್ಬರು ಕಾಣೆಯವರ ಧರ್ಮಶಾಸ್ತ್ರದ ಇತಿಹಾಸದ ಕೆಲವು ಭಾಗಗಳನ್ನು ಓದಲು ಹೇಳಿದರಂತೆ. ಭಂಡಾರ್ಕರ್ ಇನ್ಸ್ಟಿಟ್ಯೂಟ್ ಗೆ ಪತ್ರ ಬರೆದು ಆ ಪುಸ್ತಕಗಳನ್ನು ಪುಣೆಯಿಂದ ಕೊಂಡು, ಆಮೂಲಾಗ್ರವಾಗಿ ಓದಿದರಂತೆ. “ನಾನು ನನಗೆ ಬೇಕಾಗಿದ್ದನ್ನ ಓದೋಣ ಅಂತ ತರಿಸಿದೆ. ಆದರೆ, ಅಲ್ಲಿಯ ವಿಚಾರಗಳು ಎಷ್ಟು ಗಹನವಾಗಿ ಇವೆ ಅಂತ ತಿಳಿದ ಮೇಲೆ, ಇದನ್ನ ಸಂಪೂರ್ಣ ಓದಬೇಕು ಅನ್ನಿಸಿತು. ಓದಿದೆ. ನನಗೆ ನಮ್ಮ ಧರ್ಮದ ವಿಚಾರವಾಗಿ ಆವರೆಗೂ ಇದ್ದ ಎಲ್ಲ ಸಂಶಯಗಳೂ ಪರಿಹಾರವಾದವು. ನಾನು ಕಾದಂಬರಿಯಲ್ಲಿ ಯಾವುದನ್ನ ಬರೆದರೆ ಅದು ಧರ್ಮಶಾಸ್ತ್ರದ ಪರವಾಗಿ ಇರುತ್ತೆ, ಯಾವುದಲ್ಲ, ಯಾವ ಪಾತ್ರ ಇದನ್ನ ಹೇಳಬಹುದು, ಯಾವುದಲ್ಲ ಅನ್ನೋದು ಸ್ಪಷ್ಟವಾಯಿತು. ಆ ಗ್ರಂಥವನ್ನ ನಾನು ಓದಿರಲಿಲ್ಲ ಅಂದ್ರೆ ವಂಶವೃಕ್ಷವನ್ನ ಇಷ್ಟು ಚೆನ್ನಾಗಿ ಬರೆಯೋಕ್ಕೆ ಆಗ್ತಾ ಇರ್ಲಿಲ್ಲ. ಅದೊಂದೇ ಯಾಕೆ, ಹಲವು ಕಾದಂಬರಿಗಳಿಗೆ ಅದನ್ನ ಬಳಸಕೊಂಡಿದ್ದೇನೆ. ನಿಜ ಹೇಳಬೇಕೆಂದರೆ, ನನ್ನ ಜೀವನದಲ್ಲಿ ನನಗೆ ಕಣ್ಣು ತೆರೆಸಿದ ಪುಸ್ತಕ ಅದು” ಎಂದರು.
ಸಶೇಷ
The Dharma Dispatch is now available on Telegram! For original and insightful narratives on Indian Culture and History, subscribe to us on Telegram.