Illustration of Bhyrappa in a library 
Notes On Culture

ಭೈರಪ್ಪನವರ ಅರ್ಥಶುದ್ಧಿಯ ಔನ್ನತ್ಯ

ಭೈರಪ್ಪನವರ ಅರ್ಥಶುದ್ಧಿಯ ಔನ್ನತ್ಯದ ಕುರಿತು ಶ್ರೀ ಕಶ್ಯಪ್ ನಾಯಕರು ಸೋದಾಹರಣವಾಗಿ, ಕಣ್ಣಿಗೆ ಕಟ್ಟುವ ರೀತಿ ವಿವರಿಸಿದ್ದಾರೆ

Kashyap Naik

ಡಾ. ಎಸ್.ಎಲ್. ಭೈರಪ್ಪನವರ ಅರ್ಥಶುದ್ಧಿ, ಸರಳತೆ ಮತ್ತು ಗೌರವದ ಭಾವನೆಯನ್ನು ತೋರಿಸುವ ಕೆಲವು ನಿಜ ಜೀವನದ ಪ್ರಸಂಗಗಳ ಸಾರಾಂಶ ಇಲ್ಲಿದೆ. ಭೈರಪ್ಪನವರಲ್ಲಿ ಗೌರವ, ವಿನಯ, ಅರ್ಥಶುದ್ಧಿ, ಕಲೆಗಾಗಿ ನಿಷ್ಕಾಮ ಶ್ರಮ ಮತ್ತು ಇತರರಿಗೆ ಉದಾರತೆಯ ಸಂಯೋಜನೆಯನ್ನು ಈ ಪ್ರಸಂಗಗಳು ತೋರಿಸುತ್ತವೆ.

Read the Previous Episodes

ಅರ್ಥಶುದ್ಧಿ

ಭೈರಪ್ಪನವರು ಅಷ್ಟು ದೊಡ್ಡ ಸಾಹಿತಿಯಾಗಿದ್ದರೂ ನಮ್ಮೆಲ್ಲರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ನಾನು ಅವರ ಮೊಮ್ಮಗನ ವಯಸ್ಸಿನವನು. ಆದರೂ ನನ್ನನ್ನು ಸದಾ ‘ಹೋಗಿ ಬನ್ನಿ’ ಎಂದು ಬಹುವಚನದಲ್ಲಿಯೇ ಮಾತನಾಡಿಸುತ್ತಿದ್ದರು. ಒಮ್ಮೆಯೂ ಏಕವಚನದಲ್ಲಿ ಮಾತನಾಡಿಸಲಿಲ್ಲ. ನನ್ನ ಸ್ನೇಹಿತರಲ್ಲಿಯೂ ಹೀಗೆಯೇ ನಡೆದುಕೊಳ್ಳುತ್ತಿದ್ದರು.

ಇದೇ ರೀತಿ, ಅವರ ಮಗನ ವಯಸ್ಸಿನವರಾದ ಗಣೇಶರನ್ನೂ ಅವರು ಬಹುವಚನದಿಂದಲೇ ಕರೆಯುತ್ತಿದ್ದರಂತೆ. ಒಮ್ಮೆ ಗಣೇಶರು ನನಗೆ ಅವರ ಮತ್ತು ಭೈರಪ್ಪನವರ ನಡುವೆ ನಡೆದ ಪ್ರಸಂಗವೊಂದನ್ನು ಹೇಳಿದ್ದರು. ಗಣೇಶರು ಈ ಪ್ರಸಂಗವನ್ನು ಪಂಕ್ತಿಪಾವನರು  ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಗಣೇಶರು ಹಲವರು ಮಿತ್ರರೊಡನೆ ವ್ಯಾಸಂಗ ಗೋಷ್ಠಿಯನ್ನು ನಡೆಸುತ್ತಿದ್ದು, ಅದರಲ್ಲಿ ಕಾಳಿದಾಸನ ರಘುವಂಶವನ್ನು ಪಾಠ ಹೇಳುತ್ತಿದ್ದರು. ಆಗೊಮ್ಮೆ ಗೋಷ್ಠಿಗೆ ಭೈರಪ್ಪನವರನ್ನು ಆಹ್ವಾನಿಸಬೇಕೆಂದು ತೀರ್ಮಾನವಾಯಿತು. ಅದೇ ರೀತಿ ಗಣೇಶರು ಭೈರಪ್ಪರನ್ನು ಕೇಳಿಕೊಂಡರು – ಅವರೂ ಬರಲು ಒಪ್ಪಿದರು. ಒಪ್ಪುವಾಗಲೇ ಕೆಲವು ಷರತ್ತುಗಳನ್ನು ಹಾಕಿದ್ದರಂತೆ – “ನಿಮ್ಮ ವ್ಯಾಸಂಗ ಗೋಷ್ಠಿಯಲ್ಲಿ ಇದ್ದ ಸದಸ್ಯರು ಮಾತ್ರ ಬರಬೇಕು, ಬೇರೆಯವರು ಬರಕೂಡದು. ನನಗೆ ಯಾವ ವಿಶೇಷ ಮನ್ನಣೆಯೂ ಕೊಡಬಾರದು. ನನಗೆ ನಿಮ್ಮಂದ ಯಾವುದೇ ರೀತಿಯ ಉಡುಗೊರೆಯನ್ನು ಕೊಡಕೂಡದು. Objective discussion ಆಗಬೇಕು. ನಾನೇ ಹೆಚ್ಚು ಪ್ರಶ್ನೆ ಕೇಳಬೇಕೇ ಹೊರತು ನೀವು ನನಗಲ್ಲ” – ಹೀಗೆ. ಎಲ್ಲದಕ್ಕೂ ಒಪ್ಪಿಗೆಯಾಯಿತು. ಭೈರಪ್ಪನವರಿಗೆ ಏನನ್ನಾದರು ಕೊಡಬೇಕೆಂಬುದು ಗೋಷ್ಠಿಯ ಸದಸ್ಯರ ಆಸೆ. ಕೊನೆಗೆ ಗಣೇಶರು “ನನಗೆ ಅವರಿಗೇನು ಇಷ್ಟವೆಂದು ಗೊತ್ತು” ಎನ್ನುತ್ತ, ಭೈರಪ್ಪನವರಿಗೆ ಇಷ್ಟವಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರ ಕೆಲವು ಸಂಗೀತ ಪ್ರಸ್ತುತಿಗಳನ್ನು ಗೆಳೆಯರಿಂದ ಅಂತರ್ಜಾಲದಲ್ಲಿ ಹುಡುಕಿಸಿ, ಅದನ್ನು ಒಂದು ಸಿ.ಡಿ.ಯಲ್ಲಿ ರೆಕಾರ್ಡಿಂಗ್ ಮಾಡಿಸಿ ತಂದಿದ್ದರು.

ಭೈರಪ್ಪನವರು ಮೈಸೂರಿನಿಂದ ಬೆಂಗಳೂರಿನಲ್ಲಿಯ ವಿಜಯನಗರಕ್ಕೆ ಟಾಕ್ಸಿಯಲ್ಲಿ ಬಂದರು. ಆ ಟಾಕ್ಸಿಯನ್ನೂ ಗೋಷ್ಠಿಯ ಸದಸ್ಯರು ಕಳಿಸುವಂತಿಲ್ಲ. ಸಿ.ಡಿ.ಯ ಜೊತೆಗೆ ಗಣೇಶರು ಸ್ವಲ್ಪ ಹಣವನ್ನು ಒಂದು ಲಕೋಟೆಯಲ್ಲಿ ಹಾಕಿ, ಅದನ್ನು ಆ ಸಿ.ಡಿ.ಯ ಜೊತೆಗೆ ಇಟ್ಟಿದ್ದರು. ಕೊಟ್ಟಿದ್ದಾದರೂ ಭಾರೀ ಮೊತ್ತವೇನಲ್ಲ, ಟಾಕ್ಸಿಯ ಖರ್ಚು ಮಾತ್ರವೇ. ಭೈರಪ್ಪನವರು ಗೋಷ್ಠಿಗೆ ಬಂದು ಎಲ್ಲರನ್ನೂ ಮಾತನಾಡಿಸಿ, ತಮ್ಮ ವಿಚಾರವನ್ನು ಹಂಚಿಕೊಂಡರು. ಗೋಷ್ಠಿ ರಸವತ್ತಾಗಿ ನಡೆಯಿತು – ಎಲ್ಲರಿಗೂ ಸಂತಸವಾಯಿತು. ಊಟವಾದ ಬಳಿಕ, ಗಣೇಶರು ನೀಡಿದ್ದ ಸಿ.ಡಿ.ಯ ಚೀಲವನ್ನಿಟ್ಟುಕೊಂಡು ಭೈರಪ್ಪನವರು ವಾಪಸ್ಸು ಮೈಸೂರಿಗೆ ಹೊರಟರು.

ಅವರು ಮನೆ ತಲುಪಿದೊಡನೆಯೇ ಗಣೇಶರಿಗೆ ಕರೆ ಮಾಡಿ,

“ಇದೇನಿದು ಇಷ್ಟು ದುಡ್ಡನ್ನು ಕೊಟ್ಟಿದ್ದೀರ. ಇದ್ಯಾತಕ್ಕೆ?” ಎಂದು ಕೇಳಿದರಂತೆ.

ಗಣೇಶರು “ನೀವು ಅಷ್ಟು ದೂರದಿಂದ ಟಾಕ್ಸಿ ಮಾಡಿಕೊಂಡು ನಮಗಾಗಿ ಬಂದದ್ದಲ್ಲವೇ! ಆ ಟಾಕ್ಸಿ ಖರ್ಚಿಗೆ ಅಂತ ಕೊಟ್ಟೆ” ಎಂದರು.

“ನಿಮಗ್ಯಾರು ಹೇಳಿದ್ರು ನಾನು ನಿಮಗಾಗಿ ಬಂದೆ ಅಂತ? ನಾನು ನನ್ನ ಸಂತೋಷಕ್ಕಾಗಿ ಬಂದಿದ್ದು. ಈ ರೀತಿ ದುಡ್ಡು ಕೊಟ್ಟು ದೊಡ್ಡ ತಪ್ಪು ಮಾಡಿದ್ರಿ ನೀವು. ನಿಮಗೆ ಹಣ ಹಿಂದಿರುಗಿಸೋವರಗೂ ನನಗೆ ನೆಮ್ಮದಿಯಿಲ್ಲ. ನಾನು ಆದಷ್ಟು ಬೇಗ ನಿಮ್ಮ ದುಡ್ಡನ್ನು ಹಿಂದಿರುಗಿಸಬೇಕು” ಎಂದು ಪಟ್ಟು ಹಿಡಿದರು.

ಆಗ ಗಣೇಶರು “ಸರ್, ಹೇಗೂ ಇನ್ನು ಹತ್ತು – ಹದಿನೈದು ದಿನಕ್ಕೆ ಕವಲು ಕಾದಂಬರಿಯ ವಿಚಾರಗೋಷ್ಠಿಗೆಂದು ಸಿಗುತ್ತಿದ್ದೇವಲ್ಲ. ಆಗಲೇ ಕೊಡಿ,” ಎಂದರೆ ಭೈರಪ್ಪನವರಿಗೆ ಸಲ್ಲದು. ಅವರಿಗೆ ಅಲ್ಲಿಯ ತನಕ ಇನ್ನೊಬ್ಬರ ಹಣವನ್ನು ಇಟ್ಟುಕೊಳ್ಳಲಾಗದು. ಕೊನೆಗೆ ಭೈರಪ್ಪನವರೇ ಒಂದು ನಿಯಮವನ್ನು ಸೂಚಿಸಿದರು.

“ಆಗಲಿ. ನಿಮಗೆ ನಿಮ್ಮ ಹಣ ವಾಪಸ್ಸು ಮಾಡುವವರೆಗೂ ನನ್ನ ಜೊತೆ ನಿಮ್ಮ ಮಾತಿಲ್ಲ. ಹಣ ನನ್ನಲ್ಲಿಯೇ ಇಟ್ಟುಕೊಂಡು ಏನೂ ನಡೆದಿಲ್ಲದಂತೆ ನಿಮ್ಮೊಟ್ಟಿಗೆ ಇರುವುದು ಅಸಾಧ್ಯ. ಹಣ ವಾಪಸ್ಸು ನೀಡಿದ ಮೇಲೆಯೇ ನನ್ನ ಜೊತೆ ಮಾತುಕತೆ.”

ಗಣೇಶರಿಗೇನು ಇಂತಹ ಷರತ್ತುಗಳು ಒಪ್ಪಿಗೆಯೇ? ತಪ್ಪಿಗೆ ಇದು ದಂಡವೆಂದು ತೀರ್ಮಾನವಾಯಿತು. ಕೊನೆಗೆ ಗಣೇಶರು ಭೈರಪ್ಪನವರಲ್ಲಿ ಒಂದು ಷರತ್ತು ಹಾಕಿದರು.

“ನಾನು ನನ್ನ ಹಣ ವಾಪಸ್ಸು ಪಡೆಯಬೇಕೆಂದರೆ, ನೀವು ನನ್ನನ್ನು ಇನ್ನು ಮುಂದೆ ಏಕವಚನದಲ್ಲಿ ಕರೆಯಬೇಕು. ‘ಬನ್ನಿ’, ‘ಹೋಗಿ’ ಎಂಬ ಗೌರವ ಬೇಡ.”

ಇದಕ್ಕೆ ಭೈರಪ್ಪನವರು ಒಪ್ಪರು. ಕೊನೆಗೆ ಭೈರಪ್ಪನವರು, “ಆಗಲಿ. ಖಾಸಗಿಯಾಗಿ ಮಾತ್ರ ಏಕವಚನ, ಸಾರ್ವಜನಿಕವಾಗಿ ಬಹುವಚನ,” ಎಂಬ ತೀರ್ಮಾನವನ್ನು ನುಡಿದರು. ಈ ಒಪ್ಪಂದಕ್ಕೆ ಬರಲು ಅರ್ಧಘಂಟೆಯೇ ಆಯಿತು.

ಕವಲು ಕಾದಂಬರಿಯ ವಿಚಾರಗೋಷ್ಠಿ ನಡೆಯುವಷ್ಟರಲ್ಲಿ ಒಂದು ದುರ್ಘಟನೆಯಾಗಿತ್ತು. ಗಣೇಶರು ಬಿದ್ದು ಕಾಲನ್ನು ಮುರಿದುಕೊಂಡಿದ್ದರು. ಒಂದು ಕೋಲನ್ನು ಹಿಡಿದು ಗೋಷ್ಠಿಗೆ ನಡೆಯಬೇಕಾಗಿ ಬಂತು. ಭೈರಪ್ಪನವರಿಗೆ ವಿಚಾರ ತಿಳಿದಿದ್ದರೂ ಅವರು ಗಣೇಶರಿಗೆ ಕರೆ ಮಾಡಿ ಮಾತನಾಡಿರಲಿಲ್ಲ. ಗಣೇಶರು ಸಭೆಯಲ್ಲಿ ಆಗಮಿಸಿದಾಗ ಭೈರಪ್ಪನವರು ಸನ್ನೆ ಮಾಡಿ ಪಕ್ಕಕ್ಕೆ ಕರೆದರು. ಭೈರಪ್ಪನವರು ಮೊದಲಿಗೆ ಮಾಡಿದ್ದ ಕೆಲಸವೆಂದರೆ – ಅವರ ಚೀಲದಿಂದ ಅದೇ ಲಕೋಟೆಯನ್ನು ತೆಗೆದು ಗಣೇಶರ ಚೀಲಕ್ಕೆ ಹಾಕಿದ್ದು. ಲಕೋಟೆ ಗಣೇಶರ ಕೈ ತಲುಪಿದ್ದಂತೆಯೇ “ಈಗ ಹೇಳು ನೀನು ಹೇಗಿದ್ದೀಯ? ಕಾಲಿಗೇನಾಯ್ತು?” ಎನ್ನುತ್ತಾ ಗಣೇಶರ ಅರೋಗ್ಯ ವಿಚಾರಿಸಿದರು. ಇದು ಭೈರಪ್ಪನವರ ಅರ್ಥಶುದ್ಧಿ.

ಪಾತ್ರಗಳ ಅನ್ವೇಷಣೆ – ಒಂದು ತುಣುಕು

ಭೈರಪ್ಪನವರು ಪ್ರೇಕ್ಷಾ ಪ್ರತಿಷ್ಠಾನಕ್ಕೆ ಸಂಪಾದಕೀಯ ಸಲಹೆಗಾರರಾಗಿದ್ದರು ಎಂಬುದನ್ನು ಮುನ್ನವೇ ತಿಳಿಸಿದ್ದೇನೆ. ಪ್ರತಿ ವರ್ಷವೂ ಭೈರಪ್ಪನವರಿಗೆ ನಮ್ಮ ಸಂಸ್ಥೆಯಿಂದ ಹೊರತಂದ ಪುಸ್ತಕಗಳನ್ನು ಕೊಡುತ್ತಿದ್ದೆವು. ನಮ್ಮ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಿ ನಮಗೆ ಸಲಹೆಗಳನ್ನು ಆಗಾಗ ನೀಡುತ್ತಿದ್ದರು. ನಾವು ಪ್ರಕಟಿಸಿದ ಪುಸ್ತಕಗಳಲ್ಲಿ ದಾರ್ಶನಿಕರಾದ ಪ್ರೊಫೆಸರ್ ಎಂ. ಹಿರಿಯಣ್ಣನವರ ಪುಸ್ತಕಗಳ ಮರುಮುದ್ರಣ ಮತ್ತು ಡಿ.ವಿ.ಜಿ.ಯವರ ಜ್ಞಾಪಕಚಿತ್ರಶಾಲೆಯ ಆಂಗ್ಲ ಅನುವಾದಗಳನ್ನು ಮೆಚ್ಚಿಕೊಂಡಿದ್ದರು. “ಇದು ಆಗಬೇಕಾದ ಕೆಲಸ, ಮಾಡಿ” – ಇದು ಅವರ ಪ್ರೋತ್ಸಾಹದ ಮಾತು. ಕೆಲವು ವರ್ಷಗಳ ಹಿಂದೆ ಗಣೇಶರೊಡನೆ ನಾನು ಮತ್ತು ನಮ್ಮ ಪ್ರೇಕ್ಷಾ ಪ್ರತಿಷ್ಠಾನದ ಮಿತ್ರರು ಭೈರಪ್ಪನವರನ್ನು ಕಾಣಲು ಮೈಸೂರಿಗೆ ಹೋಗಿದ್ದೆವು. ಮುಂಚಿತವಾಗಿಯೇ ನಮಗೆ, “ಎಲ್ಲರಿಗೂ ಊಟ ನಾನು ಏರ್ಪಾಟು ಮಾಡಿದ್ದೇನೆ” ಎಂದಿದ್ದರು. ನಾವು ಅವರನ್ನು ಕಂಡು ಕುಶಲೋಪರಿ ಮಾತನಾಡುವಷ್ಟರಲ್ಲಿ ಊಟದ ಸಮಯವಾಯಿತು. ಅವರೇ ಹೇಳಿದ ಹೋಟೆಲ್‌ಗೆ ಹೊರಟೆವು.

ಅವರ ಕಾದಂಬರಿಗಳಲ್ಲಿಯ ಕೆಲವು ಪಾತ್ರಗಳಿಗೆ ಎಲ್ಲಿಂದ ಸ್ಪೂರ್ತಿ ಬಂದಿತು ಎಂಬ ಬಗ್ಗೆ ನಮ್ಮಲ್ಲಿ ಚರ್ಚೆಯಾಯಿತು. ಆಗವರು, ವಂಶವೃಕ್ಷದ ಬಗೆಗೆ ಮಾತನಾಡಿದರು. ನಮಗೆ ಗೊತ್ತಿದ್ದಂತೆ ಆ ಕಾದಂಬರಿಯಲ್ಲಿ ಬರುವ ಸದಾಶಿವರಾಯರ ಪಾತ್ರವು ಪ್ರೊಫೆಸರ್ ಸುರೇಂದ್ರನಾಥ್ ದಾಸ್ ಗುಪ್ತರಿಂದ ಪ್ರೇರಿತವಾದದ್ದು. ಆದರೆ, ಆ ಪಾತ್ರದ ಬಗೆಗೆ ಅವರು ಹೇಗೆ ವಿಷಯ ಸಂಪಾದಿಸಿಕೊಂಡರು ಎಂಬುದು ಕುತೂಹಲಕಾರಿ.

ಸುರೇಂದ್ರನಾಥರ ಪತ್ನಿ ಸುರಮಾ ದಾಸ್ ಗುಪ್ತ ಪ್ರಾಯಶಃ ಲಖನೌ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ. ಆ ಸಮಯಕ್ಕೆ ಸುರೇಂದ್ರನಾಥರು ತೀರಿಕೊಂಡು ಹಲವು ವರ್ಷಗಳೇ ಕಳೆದಿದ್ದವು. ಭೈರಪ್ಪನವರು ಸುರಮಾರವರನ್ನು ಭೇಟಿಯಾಗಲು ವಿಶ್ವವಿದ್ಯಾನಿಲಯಕ್ಕೆ ಹೋದರು; ಅವರಿಗೆ ಮೊದಲ ಭೇಟಿ ಸಲೀಸಾಗಿ ಸಿಗಲಿಲ್ಲ. ಅಲ್ಲಿಯ ವಾಚ್‌ಮ್ಯಾನ್‌ನಲ್ಲಿ ಸ್ನೇಹ ಬೆಳಸಿ, ಅವನ ಮೂಲಕ ಸುರಮಾರವರ ವಿಶ್ವವಿದ್ಯಾನಿಲಯದಲ್ಲಿ ಮತ್ತು ಮನೆಯಲ್ಲಿ ಇರುತ್ತಿದ್ದ ಸಮಯ ತಿಳಿದುಕೊಂಡರು. ವಿಶ್ವವಿದ್ಯಾಲಯವಲ್ಲದೆ ಸುರಮಾರವರ ಮನೆಗೇ ಹೋಗಿ, ಸುರೇಂದ್ರನಾಥ್ ದಾಸ್ ಗುಪ್ತರವರ ಪುಸ್ತಕಗಳ ಬಗೆಗೆ ಮತ್ತು ಅವರ ಕೆಲಸದ ಪ್ರಾಮುಖ್ಯದ ಬಗೆಗೆ ಮಾತನಾಡಿ, ಅದರ ಮೂಲಕ ಸುರಮಾರವರ ಮನವೊಲಿಸಿಕೊಂಡು, ಅವರಲ್ಲಿ ಒಳ್ಳೆಯ ಒಡನಾಟ ಬೆಳೆಸಿಕೊಂಡರು. ಸುರಮಾರವರಿಗಿಂತ ಇಪ್ಪತ್ತು – ಇಪ್ಪತ್ತೈದು ವರ್ಷ ಚಿಕ್ಕವರಾದ ಭೈರಪ್ಪ ಆಕೆಗೆ ಮಗನ ವಯಸ್ಸಿನವರಂತೆ ಕಂಡಿರಬಹುದು. ತತ್ತ್ವಶಾಸ್ತ್ರದ ಬಗೆಗೆ ತಿಳಿದುಕೊಳ್ಳಲು ಬಂದ ವಿದ್ಯಾರ್ಥಿ ಭೈರಪ್ಪನವರು ಕ್ರಮೇಣ ಸುರೇಂದ್ರದಾಸ್ ಗುಪ್ತರವರ ಜೀವನದ ಬಗೆಗೆ, ಅವರಿಗಾದ ಎರಡು ವಿವಾಹಗಳ ಬಗೆಗೆ, ಸುರಮಾರವರ ಮನಸ್ಸಿನಲ್ಲಿದ್ದ ಆಶೋತ್ತರಗಳ ಬಗೆಗೆ, ಪತಿಯ ಕುರಿತಾಗಿ ಅವರಿಗಿದ್ದ ಮನಃಸ್ಥಿತಿಯನ್ನು ಕೂಲಂಕಷವಾಗಿ ವಿಚಾರಿಸಿಕೊಂಡರು. ಇದಕ್ಕೆ ಹಲವು ದಿನಗಳೇ ಹಿಡಿದವು. ಇದಕ್ಕಾಗಿ ಭೈರಪ್ಪನವರು ಲಖನೌನಲ್ಲಿಯೇ ಇರಬೇಕಾಯಿತು. ಆ ಎಲ್ಲ ವಿಷಯಗಳು ಹಲವು ದಿನಗಳ ಬಳಿಕ ಬರೆದ ವಂಶವೃಕ್ಷ ಕಾದಂಬರಿಯ ಪಾತ್ರಕ್ಕೆ ಹೊಂದುವಂತೆ ದುಡಿದಿವೆ.

ಇದನ್ನು ಕೇಳಿ ತಿಳಿದುಕೊಂಡು ನಮಗೆ ಆನಂದವೇನೋ ಆಯಿತು; ಆದರೆ ಭೈರಪ್ಪನವರು ತಮ್ಮ ಕಾದಂಬರಿಯ ಪಾತ್ರಗಳನ್ನು ಬೆಳಸುವಲ್ಲಿ ಎಷ್ಟೆಲ್ಲ ದುಡಿಯುತ್ತಾರೆ ಎಂಬ ಅರಿವೂ ಮೂಡಿತು. ಆ ಕಾಲದಲ್ಲಿ (ವಂಶವೃಕ್ಷ ಬರೆಯುವ ಮುನ್ನ) ಭೈರಪ್ಪನವರೇನೂ ಪ್ರಖ್ಯಾತ ಕಾದಂಬರಿಕಾರರಾಗಿರಲಿಲ್ಲ. ಇಂತಹ ಕಾದಂಬರಿಯು ಪ್ರಖ್ಯಾತಿಯನ್ನು ಪಡೆಯುವುದೋ? ಜನರು ಕೊಳ್ಳುವರೋ? ಇಂತಹ ಕಾದಂಬರಿಯ ಕ್ರಯದಿಂದ ಸಂದ ಹಣದಲ್ಲಿ ತಮಗಾದ ಖರ್ಚುನ್ನು ಹಿಂಪಡೆಯಬಹುದೋ? – ಇಂತಹ ಯಾವ ಪ್ರಶ್ನೆಯೂ ಭೈರಪ್ಪನವರಿಗೆ ಕಾಡಿದ್ದಂತೆ ಕಾಣಲಿಲ್ಲ. ಭೈರಪ್ಪನವರಿಗೆ ಅರ್ಥಶುದ್ಧಿ ಯಾವ ಪ್ರಮಾಣದಲ್ಲಿತ್ತೋ, ಕಲೆಗೆ ಅಥವಾ ಸಾಹಿತ್ಯಕ್ಕೆ ದುಡ್ಡನ್ನು ಹೊಂದಿಸಿ ಬದುಕಬಾರದೆಂಬ ಸತ್ಯವೂ ಚೆನ್ನಾಗಿಯೇ ತಿಳಿದಿತ್ತು. ವೃತ್ತಿ ಬೇರೆ, ಪ್ರವೃತ್ತಿ ಬೇರೆ ಎಂಬ ವಿಭಜನೆಯನ್ನು ಮುಂಚಿನಿಂದಲೂ ಮಾಡಿದ್ದವರು. ವ್ಯವಹಾರ, ದುಡ್ಡು – ಇವುಗಳ ಅಳತೆಯಿಂದ ಕಲೆಯ ನಿರ್ಮಾಣವಾಗದು. ಇಂತಹ ಕಲೆಗೆ ದುಡಿಯಬೇಕಾದದ್ದು ಮಾನವ ಸ್ವಭಾವ ಮತ್ತು  ವ್ಯುತ್ಪತ್ತಿ. ಆ ಸರಕು ಭೈರಪ್ಪನವರಲ್ಲಿ ಯಥೇಷ್ಟವಾಗಿತ್ತು.

ಇಂತಹ ಹತ್ತು ಹಲವು ವಿಚಾರಗಳು ಅಂದು ಚರ್ಚಿತವಾದವು. ಊಟದ ಬಳಿಕ ಹೋಟೆಲ್ ಬಿಲ್‌ ಕೊಟ್ಟಿದ್ದು ಮಾತ್ರ ಭೈರಪ್ಪನವರೇ. ಅವರಿದ್ದಾಗ ಬೇರೆಯವರು ಹಣ ಕೊಡುವುದು ಕಷ್ಟವೇ. ಆರೇಳು ವರ್ಷಗಳ ಹಿಂದೆಯೇ ನಡೆದ ಮತ್ತೊಂದು ಪ್ರಸಂಗವನ್ನು ಇಲ್ಲಿ ಹಂಚಿಕೊಳ್ಳಬೇಕು.

ನನ್ನನ್ನು ಹೊರತುಪಡಿಸಿ, ಪ್ರೇಕ್ಷಾ ಪ್ರತಿಷ್ಠಾನದ ಮಿಕ್ಕ ಸದಸ್ಯರು ಭೈರಪ್ಪನವರನ್ನು ಕಾಣಲು ಮೈಸೂರಿಗೆ ಹೋಗಿದ್ದರು. ಆಗ ಭೈರಪ್ಪನವರು ಎಲ್ಲರನ್ನೂ ದಾಸಪ್ರಕಾಶ್ ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದರಂತೆ. ದಾರಿಯಲ್ಲಿ ಹೋಗುವಾಗ ಭೈರಪ್ಪನವರು ಸಹಜವಾಗಿ ಯಾವುದೊ ವಿಚಾರ ಹೇಳುವಂತೆ ಅವರ ಗುರುಗಳಾದ ಪ್ರೊಫೆಸರ್ ಯಾಮುನಾಚಾರ್ಯರ ಬಗೆಗೆ ಹೇಳತೊಡಗಿದರು. ಅವರು ಹೇಳಿದ್ದು ಇಂತಿತ್ತು ಎಂದು ನನ್ನ ಗೆಳೆಯರು ನನಗೆ ವಿವರಿಸಿದ್ದರು: “ನಾನು ಓದುತ್ತಿದ್ದಾಗ ನನಗೆ ತುಂಬ ಬಡತನ. ನನ್ನ ಗುರುಗಳು ಯಾಮುನಾಚಾರ್ಯರು ನನಗೆ ಆಗಾಗ ಹೋಟೆಲ್‍ನಲ್ಲಿ ದೋಸೆ ಕೊಡಿಸುತ್ತಿದ್ದರು. ನನಗೂ ಹೊಟ್ಟೆ ತುಂಬ ತಿನ್ನೋ ವಯಸ್ಸು. ಪ್ರತಿಸರಿಯೂ ಅವರು ನನಗೆ ಹೀಗೆ ಹೊಟ್ಟೆಗೆ ಹಾಕಿಸಿಯೇ ಕಳುಹಿಸುತ್ತಿದ್ದರು. ಆದರೆ ಅವರು ಒಮ್ಮೆಯೂ ನನಗೆ ಹೋಟೆಲ್ ಬಿಲ್ ಕೊಡಲು ಬಿಡಲಿಲ್ಲ. ಒಮ್ಮೆ ನಾನು ಬಿಲ್ ಕೊಡಲು ಮುಂದಾದಾಗ – “ನೋಡಪ್ಪ ದೊಡ್ಡವರಿದ್ದಾಗ ಸಣ್ಣವರು ಹೀಗೆ ಹಣ ಕೊಡೋಕ್ಕೆ ಹೋಗಬಾರದು ಅಂತ ಹೇಳಿದ್ದರು. ಅಂದಿನಿಂದ ನಾನೂ ಅದನ್ನೇ ಪಾಲಿಸುತ್ತಾ ಬಂದಿದ್ದೇನೆ.” ಈ ಕತೆಯನ್ನು ಅವರು ಪೂರ್ಣಗೊಳಿಸುವವರೆಗೂ ನಮ್ಮವರು ಹೋಟೆಲ್‌ನಲ್ಲಿ ಹಣ ಕೊಡಬಾರದೆಂಬ ಅಪ್ಪಣೆ ಮಾಡುತ್ತಿದ್ದಾರೆ ಎಂದು ಯಾರಿಗೂ ತಿಳಿಯಲಿಲ್ಲ. ಸಹಜವಾಗಿ “ಇಂದು ಹೋಟೆಲ್‌ನಲ್ಲಿ ನಾನೇ ಬಿಲ್ ಕೊಡುವೆ” ಎಂದಿದ್ದರೆ ನಮ್ಮವರೆಲ್ಲ ಏನೋ ತಕರಾರು ಮಾಡಬಹುದು ಎಂದು ಹೀಗೊಂದು ಕತೆ ಹೇಳಿ ನಮ್ಮವರು ಮರುಮಾತನಾಡದಂತೆ ಮಾಡಿದ್ದರು. ಹೀಗೆ ಪ್ರತಿ ಬಾರಿಯೂ ಏನೋ ಒಂದು ಕತೆಯನ್ನೋ, ಮೌಲ್ಯವನ್ನೋ ಹೇಳಿ, ನಮ್ಮ ಬಾಯಿ ಕಟ್ಟಿಸಿ, ಭೈರಪ್ಪನವರೇ ಬಿಲ್ ಕೊಡುತ್ತಿದ್ದರು.

ಸಶೇಷ

The Dharma Dispatch is now available on Telegram! For original and insightful narratives on Indian Culture and History, subscribe to us on Telegram.