ದಾನಶೀಲ ಭೈರಪ್ಪನವರ ಮರ್ತ್ಯಲೋಕತ್ಯಾಗ

ಈ ಸರಣಿಯ ಕಡೆಯ ಲೇಖನದಲ್ಲಿ ಶ್ರೀ ಕಶ್ಯಪ್ ನಾಯಕರು ಭೈರಪ್ಪನವರ ದಾನಶೀಲತೆಯ ಹಲವು ಪಾರ್ಶ್ವಗಳನ್ನು ಆವಿಷ್ಕರಿಸಿ, ಅವರಿಗೆ ಆರ್ದ್ರವಾದ ಅಂಜಲಿ ಸಲ್ಲಿಸಿದ್ದಾರೆ
Bhyrappa
Bhyrappa
Published on
4 min read

Read the Previous Episodes

Also Read
ಪಥದರ್ಶಕ ಭೈರಪ್ಪನವರು
Also Read
ಪರ್ವಕ್ಕೆ ತಯಾರಿ - ಪಿ.ವಿ. ಕಾಣೆಯವರ ಅಧ್ಯಯನ: ಭೈರಪ್ಪನವರ ಮಾತಿನಲ್ಲಿ
Also Read
ಭೈರಪ್ಪನವರ ಪ್ರತಿಭಾ ಪ್ರೋತ್ಸಾಹ - ದೇಶಭಕ್ತಿ
Also Read
ಭೈರಪ್ಪನವರ ಅರ್ಥಶುದ್ಧಿಯ ಔನ್ನತ್ಯ
Summary

ಭೈರಪ್ಪನವರು ಪ್ರಚಾರಬಯಸದ ಅಪ್ಪಟ ಗುಪ್ತದಾನಿಗಳು. ವಿದ್ಯಾರ್ಥಿಯೊಬ್ಬನ ಬಡತನದ ಸತ್ಯಾಸತ್ಯತೆ ತಿಳಿಯುವ ಮೊದಲೇ, ಅವನ ವಿದ್ಯಾಭ್ಯಾಸ ಕುಂಠಿತವಾಗಬಾರದೆಂಬ ಕಾಳಜಿಯಿಂದ ಹಣ ಕಳುಹಿಸಿದ ಔದಾರ್ಯ ಅವರದ್ದು. ಭೈರಪ್ಪನವರನ್ನು ಅವರ ಆರ್ಥಿಕ ಸಂಪತ್ತಿಗಿಂತ 'ಗುಣ' ಮತ್ತು 'ಸಾಹಿತ್ಯ'ದ ಮೂಲಕ ಅಳೆಯಬೇಕು. ಅವರು ಜೀವನದ ಪ್ರತಿಯೊಬ್ಬ ವ್ಯಕ್ತಿಯನ್ನೂ ತಮ್ಮ ಕಾದಂಬರಿಯ 'ಪಾತ್ರ'ಗಳನ್ನಾಗಿ ಕಂಡರೇ ಹೊರತು, ವೈಯಕ್ತಿಕ ರಾಗ-ದ್ವೇಷಗಳಿಂದಲ್ಲ.

ಗುಪ್ತದಾನ

ಭೈರಪ್ಪನವರು ದಾನಿಗಳು; ಹಲವರಿಗೆ ಸಮಯಕ್ಕೆ ತಕ್ಕಂತೆ ದಾನ ಮಾಡಿದ್ದಾರೆ. ಆದರೆ, ಯಾರಿಗೆ ಯಾವಾಗ ಎಷ್ಟು ದಾನ ಮಾಡಿದೆ ಎಂಬುದನ್ನು ಮಾತ್ರ ಎಂದೂ ಹೇಳುತ್ತಿರಲಿಲ್ಲ. ಅವರು ಒಂದು ರೀತಿಯಲ್ಲಿ ಗುಪ್ತದಾನಿಗಳೇ.

ಅವರಿಂದಲೇ ಕೇಳಿದ ಒಂದು ಕತೆ ನನ್ನ ನೆನಪಿಗೆ ಬರುತ್ತದೆ.

ಒಮ್ಮೆ ಧಾರವಾಡದಿಂದ ಯಾರೋ ಒಬ್ಬ ಹುಡುಗ ಮೈಸೂರಿನಲ್ಲಿದ್ದ ಭೈರಪ್ಪನವರಿಗೆ ಒಂದು ಪತ್ರ ಬರೆದಿದ್ದನಂತೆ. ಆತನಿಗೆ ವಿದ್ಯಾಭ್ಯಾಸಕ್ಕಾಗಿ ದುಡ್ಡಿರಲಿಲ್ಲವೆಂದು, ಇನ್ನು ಒಂದು ವಾರದಲ್ಲಿಯೇ ಕಾಲೇಜಿಗೆ ದುಡ್ಡನ್ನು ಕಟ್ಟಬೇಕೆಂದೂ, ಆ ದುಡ್ಡನ್ನು ಹೊಂದಿಸಲು ಕಷ್ಟವಾದ ಆತನಿಗೆ ಭೈರಪ್ಪನವರು ಸಹಾಯಮಾಡಬೇಕೆಂದು ಕೋರಿ ಪತ್ರ ಬರೆದಿದ್ದ. ಆ ಪತ್ರ ನೋಡಿದೊಡನೆಯೇ ಭೈರಪ್ಪನವರು ಧಾರವಾಡದಲ್ಲಿದ್ದ ತಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿ, ಆ ಹುಡುಗನ ಹೆಸರನ್ನು ಹೇಳಿ, “ಇಂತಹ ಹುಡುಗ ಇಂತಹ ಕಾಲೇಜಿನಲ್ಲಿ ಓದುತ್ತಿದ್ದಾನೆಯೇ? ಆತನ ಆರ್ಥಿಕ ಪರಿಸ್ಥಿತಿ ನಿಜಕ್ಕೂ ಕೆಟ್ಟಿದೆಯೇ?” ಎಂದು ವಿಚಾರಿಸಲು ಕೇಳಿಕೊಂಡರು. ಎರಡು ದಿನಗಳ ಬಳಿಕ ತಮ್ಮ ಸ್ನೇಹಿತರಿಗೆ ಮತ್ತೆ ಕರೆಮಾಡಿದಾಗ ಅವರಿಗಿನ್ನೂ ಇದರ ಮಾಹಿತಿ ದೊರಕಿರಲಿಲ್ಲ, ಅಥವಾ ಅವರಿನ್ನೂ ವಿಚಾರಿಸಿರಲಿಲ್ಲ. ಬೇಗನೆಯೇ ವಿಚಾರಿಸಲು ಮತ್ತೆ ಹೇಳಿ ಫೋನ್ ಇಟ್ಟರು. ಇದಾದ ಕೆಲವು ದಿನಗಳಲ್ಲಿ ಆ ಸ್ನೇಹಿತರು ಭೈರಪ್ಪನವರಿಗೆ ಫೋನ್ ಮಾಡಿ “ಆ ಹುಡುಗ ತನ್ನ ಪತ್ರದಲ್ಲಿ ಬರೆದದ್ದು ನಿಜವೇ. ನೀವು ಆತನಿಗೆ ದುಡ್ಡು ಕೊಡಬಹುದು. ನೀವು ಹೇಳಿದರೆ ನಾನೇ ಕೊಟ್ಟು ಬರುವೆ,” ಎಂದಾಗ ಭೈರಪ್ಪನವರು “ನಾನು ಆತನಿಗೆ ಮುಂಚಿತವೇ ಮನಿ ಆರ್ಡರ್ ಮಾಡಿಯಾಯಿತು,” ಎಂದರಂತೆ. ವಿಚಾರ ತಿಳಿದುಕೊಳ್ಳುವ ಮೊದಲೇ ಮನಿ ಆರ್ಡರ್ ಮಾಡಿದ್ದೇಕೆ ಎಂದು ಕೇಳಿದಾಗ ಭೈರಪ್ಪನವರ ಉತ್ತರ ಇಂತಿತ್ತು: “ನಾನು ವಿಚಾರ ಮಾಡಿದೆ. ಆತ ಬರೆದಿರೋದು ಸತ್ಯವೇ ಇದ್ದರೆ, ಸಮಯಕ್ಕೆ ಸರಿಯಾಗಿ ನಾನು ಹಣ ಕಳುಹಿಸದಿದ್ದಲ್ಲಿ ಆತನಿಗೆ ಒಂದು ವರ್ಷ ವಿದ್ಯಾಭ್ಯಾಸ ನಿಲ್ಲುತ್ತೆ. ಒಂದು ಪಕ್ಷ ಅದು ಸುಳ್ಳೇ ಇದ್ದಲ್ಲಿ ನಾನು ದುಡ್ಡು ಕೊಟ್ಟದ್ದು ವ್ಯರ್ಥವಾಗುತ್ತೆ. ನನಗೆ ಮೋಸ ಮಾಡಿಯಾದರೂ ಆತ ದುಡ್ಡು ಪಡೆಯಬೇಕೆಂದಿದ್ದರೆ ಆತನಿಗೆ ಬಡತನವಿರಬೇಕು. ಇವೆರಡರಲ್ಲಿ ನಾನು ದುಡ್ಡು ಕೊಡುವುದೇ ಒಳಿತು ಅನ್ನಿಸ್ತು. ಆತನಿಗೆ ನಿಜಕ್ಕೂ ಹಣದ ಆವಶ್ಯಕತೆಯಿದೆ ಎಂಬುದನ್ನು ಕೇಳಿ ನಾನು ಮಾಡಿದ್ದು ಸರಿಯಾದ ಕೆಲಸ ಅಂತ ತೃಪ್ತಿಯಾಯಿತು.”

ಭೈರಪ್ಪನವರಿಗೆ ಪರಿಚಿತರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೊಬ್ಬರು ಒಮ್ಮೆ ರಸ್ತೆಯ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದರಂತೆ. ಶಸ್ತ್ರಚಿಕಿತ್ಸೆಯೇ ಮೊದಲಾದ ಚಿಕಿತ್ಸೆಯು ಹಲವು ದಿನ ನಡೆದಿತ್ತು. ಈ ವಿಚಾರ ಭೈರಪ್ಪನವರಿಗೆ ತಿಳಿಯಿತು. ಭೈರಪ್ಪನವರು ಅವರಿಗೆ ಫೋನ್ ಮಾಡಿ, ಅವರ ಆರೋಗ್ಯ ವಿಚಾರಿಸಿದ ಬಳಿಕ, ಅವರ ಬ್ಯಾಂಕ್ ಖಾತೆಯ ವಿವರ ಕೇಳಿದರು. ಅವರು “ಅಯ್ಯೋ ಸರ್, ನನಗೆ ನಿಮ್ಮ ಆಶೀರ್ವಾದವೊಂದಿದ್ದರೆ ಸಾಕು, ದುಡ್ಡು ಬೇಡ” ಎಂದಾಗ, “ಆಶೀರ್ವಾದಕ್ಕೇನು, ಅದು ಸದಾ ಇರುತ್ತೆ. ಆದರೆ ಆಶೀರ್ವಾದ, ಹಿತವಚನ – ಇದರಿಂದ ಮನಸ್ಸಿಗೆ ಹಿತವಾಗುತ್ತೇ ಹೊರತು ಮತ್ತಿನ್ಯಾವ ಸಹಾಯನೂ ಆಗೋಲ್ಲ. ಅಂತಹ ಆಶೀರ್ವಾದ ಮಾಡೋಕ್ಕೆ ಸಾಕಷ್ಟು ಜನ ಸಿಕ್ತಾರೆ. ನೀವು ಸುಮ್ಮನೆ ನಿಮ್ಮ ಖಾತೆ ವಿವರ ಕೊಡಿ, ನಾನು ತಿಳಿದಷ್ಟು ದುಡ್ಡು ಹಾಕ್ತೀನಿ,” ಎಂದು ತಾಕೀತು ಮಾಡಿ ಒಂದು ಲಕ್ಷ ರೂಪಾಯಿಗಳನ್ನು ನೀಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯೆ ಓರ್ವ ಸಾಹಿತಿಯು ಅಸುನೀಗಿದ ಹಲವು ವರ್ಷಗಳ ಬಳಿಕ, ಅವರ ಪತ್ನಿಗೆ ಬಡತನವಿದೆ ಎಂದು ಕೇಳಿಬಂದಿತ್ತು. ಭೈರಪ್ಪನವರಿಗೆ ಮಂಗಳೂರು ಜಿಲ್ಲೆಯಲ್ಲಿ ಪ್ರಶಸ್ತಿಯೊಂದನ್ನು ನೀಡಿದಾಗ, ಆ ಪ್ರಶಸ್ತಿಯ ಪೂರ್ಣ ಹಣವನ್ನು ಆ ಸಾಹಿತಿಯ ಪತ್ನಿಗೆ ನೀಡಿ ಬಂದಿದ್ದರು. ಅದನ್ನು ಯಾರಿಗೂ ಹೇಳಬಾರದೆಂಬ ನಿಯಮವನ್ನು ತಮ್ಮ ಜೊತೆಗಿದ್ದವರಿಗೆ ಹೇಳಿದ್ದರು.

ಹೀಗೆ ಹಲವೆಡೆ ದಾನ ಮಾಡಿದ ಭೈರಪ್ಪನವರು ತಾವು ಇಂತಹವರಿಗೆ ದುಡ್ಡು ಕೊಟ್ಟಿದ್ದೇನೆ ಎಂಬುದನ್ನು ಎಂದೂ ಯಾರಿಗೂ ಹೇಳುತ್ತಿರಲಿಲ್ಲ. ಬೇರೆಯವರಿಗೇಕೆ, ಮನೆಯವರಿಗೇ ಹೇಳುತ್ತಿರಲಿಲ್ಲ. ಒಮ್ಮೆ ಶತಾವಧಾನಿ ಗಣೇಶರು ಭೈರಪ್ಪನವರನ್ನು ಇದಕ್ಕೆ ಕಾರಣ ಕೇಳಿದರು. ಆಗ ಭೈರಪ್ಪನವರು ಕೊಟ್ಟ ಉತ್ತರ ಮಾರ್ಮಿಕವಾಗಿತ್ತು:

“ನಾನು ಇಂತಹವರಿಗೆ ದುಡ್ಡು ಕೊಟ್ಟಿದೀನಿ ಅಂತ ನನ್ನ ಮನೆಯವರಿಗೆ ಗೊತ್ತಾದರೆ, ಅವರಿಗೆ ಇವರ ಬಗ್ಗೆ ಏನ್ ಅನ್ಸುತ್ತೆ? ಇವರಿಗೆ ನಮ್ಮಿಂದ ಉಪಕಾರವಾಗಿದೆ ಅನ್ನೋ ಅಂತಹ ಭಾವ ಬರುತ್ತೆ. ಇದೆಲ್ಲವೂ ನಮಗೇ ಗೊತ್ತಿಲ್ಲದಂತೆ ನಮ್ಮೊಳಗೆ ಬೆಳೆಯೋ ಭಾವ. ಆಗ ಅವರ ಒಡನಾಟದಲ್ಲೋ, ಮಾತಿನಲ್ಲೋ, ನಡವಳಿಕೆಯಲ್ಲೋ ಸ್ವಲ್ಪವಾದರೂ ವ್ಯತ್ಯಾಸ ಆಗುತ್ತೆ. ಅವರಿಗೆ ನೀಡಬೇಕಾದ ಗೌರವ ಕಿಂಚಿತ್ತಾದರೂ ತಗ್ಗುತ್ತೆ. ಇದು ಮಿಕ್ಕವರಿಗೆ ಗೊತ್ತಾಗದೆ ಇದ್ದರುವೆನೆಯಾ, ದುಡ್ಡನ್ನ ಇಸ್ಕೊಂಡಿರ್ತಾರಲ್ಲ ಅವರಿಗೆ ಗೊತ್ತಾಗುತ್ತೆ. ಅದು ಅವರಿಗೆ ಮುಜುಗುರ ತರುತ್ತೆ. ನಾವು ಇಸ್ಕೊಂಡಿರೋ ದುಡ್ಡನ್ನ ವಾಪಸ್ಸು ಕೊಟ್ಬುಡೋಣ ಅಂತ ಅನ್ಸಕ್ಕೆ ಶುರುವಾಗುತ್ತೆ. ಈ ವಿಚಾರವೇ ಗೊತ್ತಿಲ್ಲದಿದ್ದರೆ, ನಮ್ಮ ಮನೆಯವರೆಲ್ಲಾರೂ ಸದಾ ಅಷ್ಟೇ ಗೌರವದಿಂದ ಇವರನ್ನ ಕಾಣ್ತಾರೆ. ಹೀಗಾಗಿ ನಾನು ಏನನ್ನೂ ಹೇಳೋದಿಲ್ಲ.”

ಕಳೆದ ವರ್ಷವೋ, ಎರಡು ವರ್ಷಗಳ ಮುಂಚೆಯೋ ಏನೋ, ಭೈರಪ್ಪನವರೊಮ್ಮೆ ಗಣೇಶರಿಗೆ ಫೋನ್ ಮಾಡಿ, “ನೀನು ಮಾಡ್ತಿರೋ ಕೆಲಸಗಳೆಲ್ಲವೂ ಬಹಳ ಒಳ್ಳೇ ಕೆಲಸ. ನಾನು ನಿನಗೆ ಸ್ವಲ್ಪ ದುಡ್ಡನ್ನ ಕೊಡ್ತೀನಿ. ನೀನು ಏನೂ ಮಾತಾಡ್ದೇ ಸುಮ್ನೆ ಇಸ್ಕೊಬೇಕು,” ಎಂದರು. ಗಣೇಶರು ಮಾಡೋ ಕೆಲಸಕ್ಕೇ ದುಡ್ಡನ್ನು ತೆಗೆದುಕೊಳ್ಳದ ಆಸಾಮಿ, ಇನ್ನ ದಾನವಾಗಿ ಬಂದರೆ ತೆಗೆದುಕೊಳ್ಳುವರೇ? ಸರ್ವಥಾ ಆಗದು ಎಂದು ಹಠ ಹಿಡಿದರು. “ನಾನು ಇದನ್ನ ನಿನಗೇ ಅಂತ ಕೊಡ್ತಿಲ್ಲ, ನಿಮ್ಮ ಸಂಸ್ಥೆಯಿಂದ ಇಷ್ಟೆಲ್ಲ ಪುಸ್ತಕಗಳನ್ನ ಹೊರಗೆ ತರ್ತಾ ಇದ್ದೀರ. ಅದಕ್ಕಾಗಿ ಕೊಡ್ತಾ ಇದ್ದೀನಿ,” ಎಂದು ಹೇಳಿ, ಪ್ರೇಕ್ಷಾ ಪ್ರತಿಷ್ಠಾನಕ್ಕೆ ಸುಮಾರು ಎರಡು ವರ್ಷದ ಹಿಂದೆ (೨೦೨೪ರ ಶುರುವಿನಲ್ಲಿ) ದಾನ ಮಾಡಿದರು. ಪ್ರೇಕ್ಷಾ ಪ್ರತಿಷ್ಠಾನವು ಭಾರತೀಯ ಸಂಸ್ಕೃತಿ, ಇತಿಹಾಸ, ತತ್ತ್ವಶಾಸ್ತ್ರ, ಸಾಹಿತ್ಯ, ಮತ್ತೂ ಇನ್ನಿತರ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಐವತ್ತು ಪುಸ್ತಕಗಳನ್ನು ಹೊರತಂದಿದೆ. ಕಳೆದ ಎರಡು ವರ್ಷದಲ್ಲಿ ಭೈರಪ್ಪನವರ ಆರ್ಥಿಕ ನೆರವಿನಿಂದ ಮೂರು ನಾಲ್ಕು ಹೊತ್ತಿಗೆಗಳು ಹೊರಬಂದಂತಾಗಿದೆ. ಭೈರಪ್ಪನವರು ನಮ್ಮ ಮೇಲೆ ತೋರಿದ ಪ್ರೀತಿ, ಕಾಳಜಿಗಳನ್ನು ನಾವು ಹೇಗೆ ಮರೆಯಲು ಸಾಧ್ಯ!

ಕೊನೆಯ ದಿನಗಳು

ಭೈರಪ್ಪನವರ ಕೊನೆಯ ದಿನಗಳು ಅವರಿಗಷ್ಟೇ ಅಲ್ಲ, ಅವರಲ್ಲಿ ಪ್ರೀತಿ ವಿಶ್ವಾಸವಿದ್ದ ಹಲವರಿಗೆ ನೋವುಂಟು ಮಾಡಿದವು. ಭೈರಪ್ಪನವರು ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರನ್ನು ಭೇಟಿ ಮಾಡಲು ನಾವು ಕೆಲವರು ಸ್ನೇಹಿತರು ಹೋಗಿದ್ದೆವು.

ಭೈರಪ್ಪನವರನ್ನು ಸ್ಪೆಷಲ್ ವಾರ್ಡಿನಲ್ಲಿ ಇರಿಸಿದ್ದರು. ಅವರಿಗೆ ನಾವು ಬಂದಿರುವುದನ್ನು ತಿಳಿಸಿ, ಅವರಿಗೆ ಆಸ್ಪತ್ರೆಯ ಬಟ್ಟೆಯ ಬದಲಿಗೆ ಪ್ಯಾಂಟ್ ಶರ್ಟ್‌ನ್ನು ತೊಡಿಸಿ ನಮ್ಮನ್ನು ಒಳಗೆ ಬಿಟ್ಟರು. ಆ ಬಟ್ಟೆಯ ಬದಲಾವಣೆಯೇ ಭೈರಪ್ಪನವರಿಗೆ ಆಯಾಸವೆನಿಸಿರಬಹುದು.

“ನಾನು ಆಸ್ಪತ್ರೆಯ ಬಟ್ಟೆಯಲ್ಲೇ ಇದ್ದಿದ್ದರೆ, ನನ್ನನ್ನು ನೋಡೋದಿಕ್ಕೆ ನಿನಗೆ ಕಷ್ಟವಾಗ್ತಾ ಇತ್ತ?” ಎಂದು ಗಣೇಶರಿಗೆ ಕೇಳಿದರು. ಅವರು “ಖಂಡಿತಾ ಇಲ್ಲ”  ಎಂದರು; ನನ್ನ ಕಡೆ ತಿರುಗಿ “ನಿಮಗೆ ಕಷ್ಟವಾಗ್ತಾ ಇತ್ತ?”, ನನ್ನ ಸ್ನೇಹಿತ ಅರ್ಜುನ, ಶಶಿಯ ಕಡೆಗೆ ತಿರುಗಿ ಅದೇ ಪ್ರಶ್ನೆ ಕೇಳಿದರು. ನಮ್ಮೆಲ್ಲರದ್ದೂ ಒಂದೇ ಉತ್ತರವಾಗಿತ್ತು.

ಆಗ, “ಮತ್ತೆ, ನನಗ್ಯಾಕೆ ಇವೆಲ್ಲ ಹಾಕಬೇಕು?” ಎಂದರು. ಅವರ ದೇಹದ ಬಳಲಿಕೆ ಅಷ್ಟರ ಮಟ್ಟಿಗಿತ್ತು. ಆ ಆಯಾಸದ ಪರಿಸ್ಥಿತಿಯಲ್ಲೂ ತಮ್ಮ ಜೀವನದಲ್ಲಾದ ಘಟನೆಗಳ ವಿಶ್ಲೇಷಣೆಯನ್ನು ಮಾಡಲು ಸಿದ್ಧವಿದ್ದರು. ಸಡಿಲವಾಗಿದ್ದು ಅವರ ದೇಹದ ನರಗಳೇ ಹೊರತು, ಜೀವನ ಮೌಲ್ಯದ ದೃಢತೆಯಲ್ಲ. ಕಾಯಿಲೆಯೊಂದಿಗೆ ರಾಜಿ ಮಾಡಿಕೊಂಡರೂ, ಅವರು ನಂಬಿದ ಮೌಲ್ಯಗಳಿಗೆ ರಾಜಿಯಾಗಲಿಲ್ಲ. ಅಸಹಾಯಕರಾದರೂ ಅಶಕ್ತರಾಗಲಿಲ್ಲ.

ಅವರು ನಮ್ಮಲ್ಲಿ ಮತ್ತೂ ಮಾತನಾಡುತ್ತಿದ್ದರೋ ಏನೋ, ಅವರೆಗೆ ಶ್ರಮವಾಗಬಾರದೆಂದು ನಾವೇ ಮಾತು ಮುಂದುವರಿಸಲಿಲ್ಲ. ನಾವು ಅವರ ಆರೋಗ್ಯದ ಪರಿಸ್ಥಿತಿಯನ್ನು ವಿಚಾರಿಸಿದ ಬಳಿಕ, ಗಣೇಶರು, “ಈಗ ನಿಮಗೆ ಹೇಗೆ ಅನ್ನಸ್ತಾ ಇದೆ ಸಾರ್?” ಎಂದು ಕೇಳಿದಾಗ, “ಇನ್ನೇನು, I am waiting for my death,” ಎಂದರು.

ಅವರ ಅರೋಗ್ಯದ ವಸ್ತುಸ್ಥಿತಿ ಗೊತ್ತಿದ್ದರೂ, ಆ ಮಾತುಗಳನ್ನು ಅವರಿಂದ ಕೇಳಲು ನಮಗೆ ಕಷ್ಟವೇ ಆಯಿತು. ಇಷ್ಟು ಆತ್ಮಸ್ಥೈರ್ಯ ಹೊಂದಿದ ಮನುಷ್ಯ ಹೀಗೆ ಮಾತನಾಡುವುದನ್ನು ನೋಡಲು ಕಷ್ಟವೇ! ನಾನು ಅವರನ್ನು ನೋಡಿದ್ದು ಅದೇ ಕೊನೆ. ಆನಂತರ ಗೆಳೆಯ ಅರ್ಜುನ ತಾನು ನಿರಾಕರಣವನ್ನು ಜರ್ಮನ್ ಬಾಷೆಗೆ ಅನುವಾದಿಸಿದ ಪುಸ್ತಕವನ್ನು ಭೈರಪ್ಪನವರಿಂದ ಬಿಡುಗಡೆ ಮಾಡಿಸಲು ಅದೇ ಆಸ್ಪತ್ರೆಗೆ ಹೋಗಿದ್ದ. ಆಗ ಅವರ ಅರೋಗ್ಯದ ಬಗೆಗೆ ಪರೋಕ್ಷವಾಗಿ ತಿಳಿದಂತಾಯಿತು.

ಉಪಶಾಂತಿ

ದೀಪ ಆರಿದ ಮೇಲೆ ಅದರ ಹೊಗೆ ಕೋಣೆಯನ್ನೆಲ್ಲ ಆವರಿಸುವಂತೆ ಭೈರಪ್ಪನವರು ನಮ್ಮನ್ನಗಲಿದ ಮೇಲೆ ಅವರ ಬಗೆಗಿನ ಬೇಡದ ಸುದ್ದಿಗಳು ಲೋಕದಲ್ಲಿ ಆವರಿಸಿದವು. ಯಾವ ಮನುಷ್ಯ ಲೋಕದ ಸುದ್ದಿಗಳಿಂದ ದೂರ ಉಳಿದು ತಮ್ಮ ಕೆಲಸವನ್ನು ತಪಸ್ಸಿನಂತೆ ನಡೆಸಿದರೋ, ಅಂತಹ ಭೈರಪ್ಪನವರ ಅಂತ್ಯಕ್ರಿಯೆಗೆ ಒಡ್ಡಿದ್ದು “ಜಗದ ತಂಟೆಗಳ ಸೌದೆ ಉರಿ.”

ಭೈರಪ್ಪನವರ ಸಂಪತ್ತು ಯಾರಿಗೆ ಸೇರೀತು ಎಂಬ ತವಕ ಜಗತ್ತಿಗೆ. ಇಂತಹ ಸುದ್ದಿಯಲ್ಲಿ ಆಸಕ್ತಿಹೊಂದಿದ್ದ ಮಹಾಜನರು “ಭೈರಪ್ಪನವರ ನಿಜವಾದ ಸಂಪತ್ತೇನು?” ಎಂದು ಕೇಳಿಕೊಂಡರೆ ಉತ್ತಮ. ಭೈರಪ್ಪನವರು ತಮ್ಮ ಆರ್ಥಿಕ ಸಂಪತ್ತಿಗಾಗಿ ಹೆಸರುವಾಸಿಯಾದವರೆ? ಭೈರಪ್ಪನವರಷ್ಟೇ ಅಥವಾ ಅದಕ್ಕಿಂತ ಮಿಗಿಲಾದ ಆರ್ಥಿಕ ಸಂಪತ್ತು ಹೊಂದಿದ ಕುಟುಂಬಗಳು ಸಹಸ್ರಾರು. ಹೀಗಾಗಿ ಇಂತಹ ಆರ್ಥಿಕ ವಿಚಾರದಲ್ಲಿ ಭೈರಪ್ಪನವರದ್ದು ಯಾವ ವಿಶೇಷವೂ ಇಲ್ಲ. ಅಂತಹ ಆರ್ಥಿಕ ಸಂಪತ್ತಿನ ಕಾದಾಟಕ್ಕಾಗಿ ನ್ಯಾಯಾಲಯಗಳಿವೆ, ಕಾನೂನಿದೆ. ಭೈರಪ್ಪನವರು ಉಳಿಯುವುದು, ಉಳಿಯಬೇಕಾದುದು ಕಾನೂನಿನ ತೀರ್ಪಿನ ಪುಟಗಳಲ್ಲಿಯೋ? ಅಥವಾ ಸಹೃದಯರ ಮನಸ್ಸಿನಲ್ಲಿಯೋ? ಭೈರಪ್ಪನವರು ನಮಗೆ ಆದರಣೀಯರಾಗಿರುವುದು ಅವರ ಗಳಿಕೆಯಿಂದಲ್ಲ, ಗುಣದಿಂದ. ಅವರು ಮನೆ ಮಂದಿಗೆ ಎಷ್ಟು ನ್ಯಾಯವೊದಗಿಸಿದರು ಎನ್ನುವುದಕ್ಕಿಂತ ಯಾವ ಪಾತ್ರಕ್ಕೆ ಎಷ್ಟು ನ್ಯಾಯವೊದಗಿಸಿದರೆಂದು ತಿಳಿಯುವುದು ಉತ್ತಮ. ಕೆಲವು ವರ್ಷಗಳು ಕಳೆದರೆ, ಈ ಸುದ್ದಿಗಳು ಕಾಲಪ್ರವಾಹದಲ್ಲಿ ಕೊಚ್ಚಿ ಹೋಗುತ್ತವೆ. ಕೊನೆಗೆ ನಿಲ್ಲುವುದು ಭೈರಪ್ಪನವರ ಶುದ್ಧ ಸಾಹಿತ್ಯ ಮಾತ್ರ. ಆ ಸತ್ಯವನ್ನು ಅರಿತುಕೊಂಡು ಕನ್ನಡದ ಜನತೆ ಭೈರಪ್ಪನವರನ್ನು ಅವರ ಸಾಹಿತ್ಯದಲ್ಲಿ ಕಾಣಬೇಕೆ ವಿನಾ, ಲೆಕ್ಕ ಪತ್ರಗಳಲ್ಲಲ್ಲ.

ಅವರ ಕೊನೆಯ ದಿನಗಳನ್ನು ನೆನೆದಾಗ, ಡಿ.ವಿ.ಜಿ.ಯವರ ಎರಡು ಕಗ್ಗಗಳು ನನ್ನ ನೆನೆಪಿಗೆ ಬರುತ್ತವೆ:

 ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? |

ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ||

ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು |

ಬೆನ್ನಿನಲಿ ಹೊತ್ತು ನಡೆ – ಮಂಕುತಿಮ್ಮ || ೭೧೮

ತೊಲಗೆಲವೊ ಮನೆಯಿಂದ ಮನವು ಬರಡಾದಂದೆ |

ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ||

ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ |

ತೊಲಗಿ ನೀ ಮರೆಯಾಗು – ಮಂಕುತಿಮ್ಮ || ೯೨೬

ಒಮ್ಮೆ ಭೈರಪ್ಪನವರು ಯಾರೋ ಪ್ರತಿಷ್ಠಿತ ಗರ್ವಿತ ವ್ಯಕ್ತಿಯನ್ನು ಭೇಟಿ ಮಾಡಲು ಮುಂದಾಗಿದ್ದಾಗ, ಅವರ ಜೊತೆಗಿದ್ದ ಗೆಳೆಯ ಸಂದೀಪ ಬಾಲಕೃಷ್ಣ ಭೈರಪ್ಪನವರನ್ನು ತಡೆದು, “ಅಂತಹ ವ್ಯಕ್ತಿಯೊಡನೆ ನೀವೇಕೆ ಮಾತನಾಡಬೇಕು? ಆತನಿಗೆ ತುಂಬ ಅಹಂಕಾರ, ನಿಮ್ಮ ಬಗ್ಗೆ ತಿಳಿದೂ ಇಲ್ಲ, ಗೌರವವೂ ಇಲ್ಲ,” ಎಂದರು. ಆದರೂ ಭೈರಪ್ಪನವರು ಆ ವ್ಯಕ್ತಿಯಲ್ಲಿ ಮಾತು ಬೆಳಸಿದರು.

ಆ ಬಳಿಕ ಸಂದೀಪರಿಗೆ ಸಮಜಾಯಿಶಿ ನೀಡಿದರಂತೆ: “ವ್ಯಕ್ತಿಗಳು ಹೇಗಿದ್ದರೇನು? ಇಂತಹ ವ್ಯಕ್ತಿಗಳನ್ನು ಭೇಟಿ ಮಾಡಿದಾಗಲಲ್ಲವೇ ನನ್ನ ಕಾದಂಬರಿಗಳಿಗೆ ಇಂಥ ಪಾತ್ರವೊಂದು ಸಿಕ್ಕಲು ಸಾಧ್ಯ. ಈತನೂ ಮುಂದೊಂದು ಪಾತ್ರವಾಗಬಲ್ಲ. ನಾನು ಒಳಿತನ್ನೆ ಅರಸಿ ಹೊರಡುವವನಲ್ಲ. ನನಗೆ ಎಲ್ಲರೂ ಪಾತ್ರಗಳಾಗಿ ಕಾಣಿಸುತ್ತಾರೆ.”

ಅವರ ಜೀವನದ ಕೊನೆಯ ಘಟ್ಟದಲ್ಲೂ ಅವರ ಒಡನಾಟದಲ್ಲಿದ್ದ ವ್ಯಕ್ತಿಗಳನ್ನು ತಮ್ಮ ಜೀವನಕ್ಕೆ ಒಳಿತೋ, ಕೆಡಕೋ ಎಂದು ನೋಡದೆ, ಪಾತ್ರಗಳಾಗಿಯೇ ಕಂಡದ್ದು ಅವರ ಹಿರಿತನ. ಹಲವು ಬಾರಿ ಡಿ.ವಿ.ಜಿ. ಯವರ ‘ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ,’ ಎಂಬ ಕಗ್ಗವನ್ನು ಉದ್ಧರಿಸುತ್ತ ಗಣೇಶರು ನನಗೆ ಹೇಳಿದ್ದುಂಟು “ಜಗತ್ತೆಲ್ಲವೂ ಒಂದು ರಂಗಭೂಮಿಯೇ. ಆದರೆ ಒಂದು ನಾಟಕವನ್ನ ನೋಡುವಂತೆ ತಟಸ್ಥವಾಗಿ ನಮಗೆ ನೋಡಕ್ಕೆ ಯಾಕೆ ಆಗೋದಿಲ್ಲ ಅಂದ್ರೆ, ಇದರಲ್ಲಿ ನಾವು ಒಂದು ಪಾತ್ರವೇ. ನಾವು ಪಾತ್ರವಾಗಿದ್ದೀವಿ ಅಂತ ತಿಳಿದೂ, ಮಿಕ್ಕ ನಾಟಕವನ್ನು ನೋಡಬೇಕು. ಅದು ಕಷ್ಟದ ಕೆಲಸ”.

ಡಿ.ವಿ.ಜಿ. ಬರೆದಂತೆ ಬದುಕಿದವರು ಭೈರಪ್ಪ. ಭೈರಪ್ಪನವರು ತಪಸ್ವಿಗಳು. ಅವರಿಗೆ ನನ್ನ ಅಂಜಲಿ-ಪ್ರಣಾಮಗಳು ಸಲ್ಲುತ್ತವೆ.

|| ಸರ್ವಂ ಶಿವಂ ||

The Dharma Dispatch is now available on Telegram! For original and insightful narratives on Indian Culture and History, subscribe to us on Telegram.

logo
The Dharma Dispatch
www.dharmadispatch.in